ಕರ್ನಾಟಕ

ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಕೊರೊನಾ; ಹಳೆಬೀಡಿನ ಗ್ರಾಮವೊಂದು ಸೀಲ್‌ಡೌನ್..!

Pinterest LinkedIn Tumblr


ಹಾಸನ: ಬೆಂಗಳೂರಿನಿಂದ ಬಂದ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡ ಪರಿಣಾಮ ಹಳೆಬೀಡು ಸಮೀಪದ ಚೀಲನಾಯ್ಕನಹಳ್ಳಿ ಗ್ರಾಮವನ್ನು ಶುಕ್ರವಾರ ಸೀಲ್‌ಡೌನ್‌ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿ 24 ವರ್ಷದವನಾಗಿದ್ದು, ಸೋಂಕಿತ ವ್ಯಕ್ತಿಯ ತಂದೆ, ತಾಯಿಯನ್ನು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಸದ್ಯ ಆತನ ತಂದೆ ತಾಯಿಯನ್ನು ಹೊಂ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕಿತ ವ್ಯಕ್ತಿ ತಿರುಗಾಡಿದ್ದಾನೆ ಎನ್ನಲಾಗಿರುವ ರಾಜಗೆರೆ, ಬಸ್ತಿಹಳ್ಳಿ ಹಾಗೂ ಹಳೇಬೀಡು ಆಸುಪಾಸಿನಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ನೌಕರರು ಕಾರ್ಯಪ್ರವೃತ್ತರಾಗಿದ್ದಾರೆ.

ಚೀಲನಾಯ್ಕನಹಳ್ಳಿ, ಬಸ್ತಿಹಳ್ಳಿ, ಹಳೇಬೀಡು ಹಾಗೂ ರಾಜಗೆರೆ ಗ್ರಾಮಗಳಲ್ಲಿ ಧ್ವನಿವರ್ಧಕದ ಮುಖಾಂತರ ಜನರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಕೊರೊನಾ ಸೋಂಕು ಸಮುದಾಯಕ್ಕೆ ಹೆಚ್ಚಾಗಿ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ರಚಾರ ಮಾಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಿಡಿಒ ರವಿಕುಮಾರ್, ಚೀಲನಾಯ್ಕನಹಳ್ಳಿ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದ್ದೇವೆ. ಗ್ರಾಮದ ಸೀಲ್ಡೌನ್ ಪ್ರದೇಶಕ್ಕೆ ಸ್ಯಾನಿಟೈಸೇಷನ್ ಸಹ ಮಾಡಿಸಲಾಗುತ್ತೆ. ಜನರು ತುರ್ತು ಕೆಲಸ ಇದ್ದಾಗ ಮಾತ್ರ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡಬೇಕು ಎಂದು ಗ್ರಾಮ ಪಂಚಾಯತಿ ಟಾಸ್ಕ್‌ಫೋರ್ಸ್‌ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.

ಸದ್ಯ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯ್, ಡಾ,ನರಸೇಗೌಡ, ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್ ಸಬ್ಇನ್ಸ್ಪೆಕ್ಟರ್ ಶಕುಂತಲಮ್ಮ, ಪಿಡಿಒ ರವಿಕುಮಾರ್, ಉಪ ತಹಶೀಲ್ದಾರ್ ಕೆ.ಜಿ.ಪ್ರದೀಪ್ ಕಂದಾಯ ನಿರೀಕ್ಷಕ ವಸಂತ ಕುಮಾರ್ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.

Comments are closed.