ಬೆಂಗಳೂರು(ಜೂನ್ 24): ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಜೊತೆಗೆ ಸಮುದಾಯಕ್ಕೆ ಹರಡುತ್ತಿದೆ ಎಂಬ ಮಾಹಿತಿ ಕೂಡ ಇದೆ. ಹಾಗಾಗಿ ಇದು ಸಮುದಾಯಕ್ಕೆ ಹಬ್ಬುತ್ತಿದೆಯಾ ಅನ್ನೋದರ ಬಗ್ಗೆ ತಿಳಿದುಕೊಳ್ಳಲು ಇನ್ನೂ ಮುಂದೆ ಕೊರೋನಾ ಪರೀಕ್ಷೆಯನ್ನು 15 ಕ್ಯಾಟಗರಿಯಲ್ಲಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ರಾಮುಲು ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಶ್ರೀರಾಮುಲು, ಹೊರಗಿನಿಂದ ಬಂದವರು, ವ್ಯಾಪಾರಿಗಳು, ಕೈಗಾರಿಕೆಯಲ್ಲಿ ಕೆಲಸ ಮಾಡುವವರು, ಮಾರುಕಟ್ಟೆಗಳಲ್ಲಿ ಕೆಲಸ ಮಾಡುವವರು ಸೇರಿ 15 ಕೆಟಗರಿಗಳಲ್ಲಿರುವ ಜನರಿಗೆ ಕೊರೋನಾ ಟೆಸ್ಟ್ ಮಾಡುತ್ತೇವೆ ಅಂತಾ ಹೇಳಿದರು. ಹಿರಿಯ ನಾಗರಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದ ಅವರು, ಇದರಿಂದ ಸಮುದಾಯಕ್ಕೆ ಹೇಗೆ ಹರಡುತ್ತಿದೆ ಅನ್ನೋದು ತಿಳಿದುಬರಲಿದೆ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದೆ. 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯೂ ಪ್ಯಾನಿಕ್ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಇರುತ್ತದೆ. ಕಂಟೈನ್ಮೆಂಟ್ ಜೋನ್ನಿಂದ ಬರುವ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸುವ ಬಗ್ಗೆ ತೀರ್ಮಾನ ಆಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.
ಲಾಕ್ ಡೌನ್ ಮತ್ತೆ ಬೇಕಾ ಅಥವಾ ಬೇಡವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ವೈಯಕ್ತಿಕ ಅಭಿಪ್ರಾಯಗಳು ಬೇರೆ. ಹೊರಗಡೆಯಿಂದ ಬರುವವರಿಂದಲೇ ಜಾಸ್ತಿ ಹರಡುತ್ತಿದೆ. ಈಗಾಗಲೇ ಕೆಲ ಭಾಗಗಳನ್ನ ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಸೋಮವಾರ ಟಾಸ್ಕ್ ಫೋರ್ಸ್ ಕಮೀಟಿ ಸಭೆ ಇದೆ. ಅಲ್ಲಿ ಇದೆಲ್ಲದರ ಬಗ್ಗೆ ಸಮಗ್ರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಶ್ರೀರಾಮುಲು ಹೇಳಿದರು.
Comments are closed.