ಕರ್ನಾಟಕ

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ: 2889 ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳಿಂದ ಪರೀಕ್ಷೆ

Pinterest LinkedIn Tumblr


ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಭೀತಿಯ ನಡುವೆಯೇ ನಾಳೆಯಿಂದ ಎಸ್‌ಎಸ್ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿದ್ದು, ರಾಜ್ಯಾದ್ಯಂತ 8,48,203 ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, 2889 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ನಾಳೆ 81,265 ಪರೀಕ್ಷಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಆರೋಗ್ಯ, ಗೃಹ, ಸಾರಿಗೆ ಸಿಬಂದಿ ಸೇರಿದಂತೆ ಒಟ್ಟು ಒಂದೂವರೆ ಲಕ್ಷ ಸಿಬ್ಬಂದಿ ನೇಮಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಈ ಸಂಬಂಧ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಈ ಬಾರಿಯ ಪರೀಕ್ಷೆ ಶಿಕ್ಷಣ ಇಲಾಖೆ ನಡೆಸುತ್ತಿಲ್ಲ. ಇಡೀ ಸರ್ಕಾರವೇ ನಡೆಸುತ್ತಿದೆ. ಪರೀಕ್ಷಾ ಕೇಂದ್ರಗಳಿಗೆ ವಿಶೇಷ ಭದ್ರತೆ‌ ಒದಗಿಸಲಾಗಿದೆ ಎಂದರು.

ಪರೀಕ್ಷಾ ಅಕ್ರಮಗಳ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆಗಳ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಂಡಿದ್ದೇವೆ. ಗೃಹ, ಆರೋಗ್ಯ, ಸಾರಿಗೆ ಇಲಾಖೆಯ ಸಹಕಾರ ನೀಡುತ್ತಿದೆ. ಗೃಹ ಇಲಾಖೆಯೂ ಅಗತ್ಯ ಸಹಕಾರ ನೀಡುತ್ತಿದೆ. ಪರೀಕ್ಷಾ ಕೇಂದ್ರಗಳ‌ ಬಳಿ ಜನ ದಟ್ಟಣೆ ತಡೆಯಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ ಎಂದರು.

ಪರೀಕ್ಷೆ ಅಕ್ರಮ ತಡೆಗಟ್ಟಲು ಕ್ರಮ, ಕಾಪಿ ತಡೆಗಟ್ಟುವುದು, ಪ್ರಶ್ನೆ ಪತ್ರಿಕೆ ಸುರಕ್ಷತೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ದ್ವಾರದಲ್ಲಿ ಜನ ದಟ್ಟಣೆ ಆಗದಂತೆ ಕ್ರಮ, ಥರ್ಮಲ್ ಟೆಸ್ಟ್, ಮಾಸ್ಕ್ ವಿತರಣೆ, ನೂಕು ನುಗ್ಗಲು ತಡೆಗಟ್ಟುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೇರೆ ರಾಜ್ಯಗಳಲ್ಲಿ 12ನೇ ತರಗತಿ ಮುಖ್ಯವಾದ ಘಟ್ಟ. ಆದರೆ ನಮ್ಮಲ್ಲಿ ಎಸ್ಸೆಲ್ಸಿ ಪ್ರಮುಖ ಘಟ್ಟ’ ಎಂದು ಹೇಳಿದ ಶಿಕ್ಷಣ ಸಚಿವರು, ‘ಹೈಕೋರ್ಟ್ ನಲ್ಲೂ ಪರೀಕ್ಷೆಗೆ ತಡೆ ಕೋರಿ ಕೆಲವರು ಹೋಗಿದ್ದರು, ಹೈಕೋರ್ಟ್ ನಲ್ಲಿ ಪರೀಕ್ಷೆಗೆ ಹಸಿರು ನಿಶಾನೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಲ್ಲೂ ಹಸಿರು ನಿಶಾನೆ ಸಿಕ್ಕಿದೆ. ಪರೀಕ್ಷೆಯನ್ನು ನಮ್ಮ ಕರ್ತವ್ಯದಂತೆ ನಡೆಸ್ತೇವೆ. ಪರೀಕ್ಷೆ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟು 2889 ಪರೀಕ್ಷಾ ಕೇಂದ್ರಗಳಿವೆ. ಒಂದು ಹಾಲ್‌ನಲ್ಲಿ ಕೇವಲ 18 ವಿದ್ಯಾರ್ಥಿಗಳು ಮಾತ್ರ ಬರೆಯಲಿದ್ದು, ಪ್ರತಿಯೊಬ್ವರೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕಿದೆ. ಎಲ್ಲರ ತಾಪಮಾನ ಪರೀಕ್ಷೆ ಮಾಡಲಾಗುತ್ತೆ, ಹೆಚ್ಚು ತಾಪಮಾನ ಇದ್ರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ತೀರ್ಮಾನಿಸಲಾಗಿದೆ ಎಂದರು.

Comments are closed.