ಬೆಂಗಳೂರು; ಕೊರೋನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಶಾಲೆಗಳು ಪುನರಾರಂಭಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಸರ್ಕಾರ ಅಭಿಪ್ರಾಯ ಕೇಳಿತ್ತು. ಅದರಂತೆ ಸರ್ಕಾರಿ ಶಾಲೆಗಳು ಪೋಷಕರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ಶಾಲೆ ತೆರೆಯಲು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರ್ಕಾರ ಜನರಿಗೆ ಮೂರು ಪ್ರಶ್ನೆ ಕೇಳಿತ್ತು. ಅದಕ್ಕೆ ಪೋಷಕರ ಏನುತ್ತರ ಕೊಟ್ಟಿದ್ದಾರೆ ಗೊತ್ತಾ?
ಮಾರ್ಚ್ ಅಂತ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಮೊದಲು ಕೈಗೊಂಡ ಕ್ರಮವೇ ಸರಕಾರಿ ಶಾಲೆಗಳನ್ನು ಬಂದ್ ಮಾಡಿ ರಜೆ ಘೋಷಿಸಿತ್ತು. ಯಾಕೆಂದರೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೋಂಕು ಹರಡಬಾರದೆಂದು ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿತ್ತು. ಅದಾದ ಮೇಲೆ ಎರಡು ತಿಂಗಳ ಲಾಕ್ಡೌನ್ನಲ್ಲಿ ಶಾಲಾ-ಕಾಲೇಜು ತೆರೆಯಲು ಅವಕಾಶವಿರಲಿಲ್ಲ. ಲಾಕ್ ಡೌನ್ ಸಡಿಲಿಕೆ ಬಳಿಕ ಎಲ್ಲ ಉದ್ಯಮಗಳು ತೆರೆದಂತೆ ಶಾಲಾ-ಕಾಲೇಜು ತೆರೆಯಲು ಸರ್ಕಾರ ಆರಂಭದಲ್ಲಿ ಉತ್ಸಾಹ ತೋರಿತು. ಆದರೆ ಇದಕ್ಕೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಯಿತು. ಈ ಕಾರಣಕ್ಕೆ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್ಡಿಎಂಸಿ ಸದಸ್ಯರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದರು.
ಇದೇ ಜೂನ್ 10ರಿಂದ 20ರವರೆಗೆ ಶಾಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಹತ್ತು ದಿನಗಳ ಕಾಲ ಸರಕಾರಿ ಶಾಲೆಗಳಲ್ಲಿ ಪೋಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳಿಂದಲೂ ಶಾಲೆ ಪುನಾರಂಭ ಮಾಡುವ ಕುರಿತು ಅಭಿಪ್ರಾಯ ಕೇಳಿತ್ತು. ಇದರಲ್ಲಿ ಶಾಲೆ ಪುನಾರಂಭಕ್ಕೆ ಶೇ.95 ರಷ್ಟು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಉಳಿದ ಶೇ.5ರಷ್ಟು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಗೊಂದಲವಿದೆ. ಕೊರೋನಾ ಹತೋಟಿಗೆ ಬಂದರೆ ಮಕ್ಕಳನ್ನು ಕಳುಹಿಸಲು ರೆಡಿ ಎಂದಿದ್ದಾರೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು ಶಾಲೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ಬಹಿರಂಗಗೊಂಡಿದೆ.
ಶಾಲೆ ಪುನಾರಂಭ ಮಾಡಲು ಪೋಷಕರ ಬಳಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿತ್ತು. ಜೂನ್ 20 ಕೊನೆಯ ದಿನವಾಗಿತ್ತು. ಈಗಾಗಲೇ ಬಹುತೇಕ ಶಾಲೆಗಳು ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಪೋಷಕರಿಗೆ ಮೂರು ಮಾದರಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು.
1.ಕೊರೋನಾ ನಡುವೆ ಶಾಲೆ ಪುನಾರಂಭ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯ?
2.ಶಿಫ್ಟ್ ಆಧಾರದಲ್ಲಿ ತರಗತಿಗಳನ್ನು ನಡೆಸುವ ಬಗ್ಗೆ?
3.ಶಾಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶಾಲೆ ಆರಂಭಿಸುವ ಬಗ್ಗೆ?
ಈ ಮೂರು ಪ್ರಶ್ನೆಗಳನ್ನು ಪೋಷಕರು, ವಿದ್ಯಾರ್ಥಿಗಳಿಗೆ ಕೇಳಲಾಗಿತ್ತು. ಇದರಲ್ಲಿ ಶೇ.95 ರಷ್ಟು ಪೋಷಕರು ಶಾಲೆ ಪುನಾರಂಭ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲ ಪ್ರಶ್ನೆಗೆ ಶೇ.95ರಷ್ಟು ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ಎರಡನೇ ಪ್ರಶ್ನೆಗೆ ಶೇ.80ರಷ್ಟು ಪೋಷಕರು ವಿರೋಧ ತೋರಿದ್ದಾರೆ. ಹಾಗೆಯೇ ಕೊನೆಯ ಪ್ರಶ್ನೆಗೆ ಶೇ.80 ರಷ್ಟು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸದ್ಯಕ್ಕಂತೂ ಸರಕಾರಿ ಶಾಲೆಗಳು ತೆರೆಯೋದು ಬೇಡ ಎಂಬುದು ಎಲ್ಲರ ಸಹಮತವಾಗಿದೆ. ಹೀಗಾಗಿ ಸದ್ಯಕ್ಕೆ ಶಾಲೆಗಳು ತೆರೆಯುವುದು ಬಹುತೇಕ ಅನುಮಾನವಾಗಿದೆ. ಆಗಸ್ಟ್ 15ರ ನಂತರ ಕೊರೋನಾ ವೈರಸ್ ಸೋಂಕು ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜು ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸದ್ಯ ಪೋಷಕರು ಶಾಲೆ ಪುನರಾರಂಭಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಶಾಲೆಗಳಿಗೆ ರಜೆ ಮುಂದುವರೆಯಲಿದೆ.
Comments are closed.