ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಪೊಲೀಸ್ ಕಾನ್ಸ್​​ಟೇಬಲ್​​ನಿಂದ ಕುಟುಂಬದ 4 ಮಂದಿಗೆ ಕೊರೋನಾ ಸೋಂಕು

Pinterest LinkedIn Tumblr


ಚಿಕ್ಕಮಗಳೂರು(ಜೂ.23): ರಾಜ್ಯಾದ್ಯಂತ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೊರೋನಾ ತಡೆಗಟ್ಟಲು ತೊಡೆ ತಟ್ಟಿ ನಿಂತಿದ್ದ ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿದೆ. ಹಗಲಿರುಳು ಕೆಲಸ ಮಾಡ್ತಿದ್ದ ಪೊಲೀಸರಿಗೆ ಕೊರೊನಾ ಆಟ್ಯಾಕ್ ಆಗ್ತಿತ್ತು. ಇದೀಗ ಪೊಲೀಸ್ ಕುಟುಂಬದ ಸರದಿ. ಕಾಫಿನಾಡಿನಲ್ಲಿ ಮೊನ್ನೆ ನಾಲ್ಕು ಪೊಲೀಸರಿಗೆ ಸೋಂಕು ತಗುಲಿತ್ತು. ನಿನ್ನೆ ಓರ್ವ ಪೇದೆಯಿಂದ ಕುಟುಂಬದ ನಾಲ್ವರಿಗೆ ಸೋಂಕು ತಗುಲಿದ್ದು ಜಿಲ್ಲೆಯ ಜನರಲ್ಲಿ ಕೊರೋನಾ ನಡುಕ ಹೆಚ್ಚಾಗಿದೆ.

ಇಷ್ಟು ದಿನ ಕೊರೋನಾ ವಾರಿಯರ್ ಆಗಿದ್ದ ಖಾಕಿಗಳು ಈಗ ಕೊರೋನಾ ಸ್ಪ್ರೆಡ್ಡರ್ಸ್ ಆಗಿದ್ದಾರಾ ಎಂಬ ಅನುಮಾನ ಮೂಡ್ತಿದೆ. ಯಾಕಂದ್ರೆ, ಕಾಫಿನಾಡಿನಲ್ಲೀಗ ಪೊಲೀಸರಿಂದಲೇ ಕೊರೋನಾ ಹರಡುವ ಭಯ ಶುರುವಾಗಿದೆ. ಮೊನ್ನೆ ಚಿಕ್ಕಮಗಳೂರಿನ ತರೀಕೆರೆಯ ನಾಲ್ವರು ಪೊಲೀಸರಿಗೆ ಕೊರೋನಾ ದೃಢಪಟ್ಟಿತ್ತು. ನಿನ್ನೆ ಬೆಂಗಳೂರು ಮೂಲದ ಪೊಲೀಸ್ ಪೇದೆಯಿಂದ ಅಜ್ಜಂಪುರ ನಾರಾಯಣಪುರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗುಲಿದೆ. ಇದ್ರಿಂದ ಜಿಲ್ಲೆಯ ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.

ತರೀಕೆರೆ ಡಿವೈಎಸ್ಪಿ ಕಚೇರಿಯ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಬಂದಿತ್ತು, ನಾಲ್ವರಿಗೂ ಜೂನ್ 17ರ ರ್ಯಾಂಡಮ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಇದರಿಂದ ತರೀಕೆರೆಯಲ್ಲಿ ಆತಂಕ ಹೆಚ್ಚಾಗಿತ್ತು, ಜೊತೆಗೆ ಕ್ವಾರಂಟೈನ್​​ನಲ್ಲಿರೋ 20ಕ್ಕೂ ಹೆಚ್ಚು ಪೊಲೀಸರು ಅಯ್ಯೋ ದೇವ್ರೇ ಅಂತಿದ್ರು. ಇದೀಗ, ತರೀಕೆರೆಯ ಜನ ಪೊಲೀಸರೆಂದರೆ ಮತ್ತೊಂದು ರೀತಿಯ ಭಯದಲ್ಲಿದ್ದಾರೆ. ಪಾಸಿಟಿವ್ ಬಂದಿರೋ ನಾಲ್ವರು ಪೇದೆಗಳು ಕ್ರೈಂ ಮೀಟಿಂಗ್ ಅಟೆಂಡ್ ಮಾಡಿದ್ದು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಇನ್ಸ್ ಪೆಕ್ಟರ್ ಗಳು ಓ ಮೈ ಗಾಡ್ ಅಂತಿದ್ದಾರೆ. ಆ ನಾಲ್ವರು ಸಭೆಯಲ್ಲಿ ಭಾಗಿಯಾಗಿದ್ದಲ್ಲದೇ ವರದಿ ಬರೋವರ್ಗೂ ಮನೆಯವರು, ಸ್ನೇಹಿತರ ಜೊತೆಗೂಡಿದ್ದಾರೆ. ಜನ ಈ ಭಯದಿಂದ ಹೊರಬರುವ ಮುನ್ನವೇ ಅಜ್ಜಂಪುರದ ನಾರಾಯಣಪುರದಲ್ಲಿ ಪೊಲೀಸ್ ಪೇದೆ ಕುಟಂಬದ ನಾಲ್ವರಿಗೆ ಸೋಂಕು ತಗುಲಿರೋದು ಜಿಲ್ಲೆಯ ಜನರಲ್ಲಿ ಕೊರೋನಾ ಭಯ ದುಪ್ಪಟ್ಟಾಗಿದೆ.

ಇನ್ನು ತರೀಕೆರೆಯ ನಾಲ್ವರು ಪೊಲೀಸರಿಗೆ ಎಲ್ಲಿಂದ, ಯಾರಿಂದ ಕೊರೋನಾ ಬಂತು ಅನ್ನೋ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಇದು ಕೂಡ ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ರೆ, ಇತ್ತ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರೋದ್ರಿಂದ ಜನ ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಬೆಂಗಳೂರಿನ ಪೇದೆ ಗುರುವಾರ ಅಜ್ಜಂಪುರಕ್ಕೆ ಬಂದು ಹೋಗಿದ್ರು. ಆ ಪೇದೆ ಕುಟುಂಬದ ಹೆಂಡತಿ, ಐದು ತಿಂಗಳ ಮಗು, ಅತ್ತೆ-ಮಾವ ಎಲ್ಲರಿಗೂ ಪಾಸಿಟಿವ್ ಬಂದಿದೆ. ಅವರಿಂದ ಅಕ್ಕಪಕ್ಕದವರಿಗೆ ಇನ್ನೆಷ್ಟು ಜನಕ್ಕೆ ಕೊರೋನ ಅಂಟಿರುತ್ತೋ ಎಂದು ಇಡೀ ನಾರಾಯಣಪುರ ಆತಂಕಕ್ಕೀಡಾಗಿದೆ. ಜೊತೆಗೆ ಒಂದು ವೇಳೆ ಪೇದೆ ಬಸ್ಸಿನಲ್ಲಿ ಬಂದು ಹೋಗಿದ್ರೆ ಸೋಂಕಿತರ ಸಂಖ್ಯೆಯನ್ನ ಲೆಕ್ಕ ಹಾಕೋದು ಕೂಡ ಕಷ್ಟವಾಗಲಿದೆ.

ಒಟ್ಟಾರೆ, ಕಾಫಿನಾಡಿಗೆ ಪೊಲೀಸರೇ ಕಂಟಕಪ್ರಾಯವಾದಂತಿದೆ. ಮೊನ್ನೆ ನಾಲ್ಕು ಪೊಲೀಸರು, ನಿನ್ನೆ ಪೇದೆ ಫ್ಯಾಮಿಲಿಯ ನಾಲ್ವರು. ಅವರಿಂದ ಮತ್ತೆಷ್ಟೋ ದೇವರೇ ಬಲ್ಲ. ಇಷ್ಟು ದಿನ ಕೊರೋನಾ ವಾರಿಯರ್ ಆಗಿದ್ದ ಪೊಲೀಸರು ಈಗೀಗ ಕೊರೋನಾ ಸ್ಪ್ರೆಡ್ಡರ್ಸ್ ಆಗಿದ್ದಾರಾ ಅನ್ನೋ ಅನುಮಾನ ಸ್ಥಳಿಯರನ್ನ ಕಾಡ್ತಿರೋದಂತೂ ಸುಳ್ಳಲ್ಲ.

Comments are closed.