ಕರ್ನಾಟಕ

ರಾಜ್ಯದಲ್ಲಿ ಮತ್ತೆ ಲಾಕ್​ಡೌನ್​ ಇಲ್ಲ; ಡಿಸಿಎಂ ಡಾ. ಅಶ್ವಥ್ ನಾರಾಯಣ

Pinterest LinkedIn Tumblr


ಬೆಂಗಳೂರು (ಜೂ. 22): ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚೆಚ್ಚು ಸ್ಪೋಟಗೊಳ್ಳುತ್ತಿದೆ. ಬೆಂಗಳೂರಲ್ಲಂತೂ ಕೊರೋನಾ ಅಟ್ಟಹಾಸ ಅತಿಯಾಗಿದೆ. ಹೀಗಾಗಿ, ಬೆಂಗಳೂರಲ್ಲಿ ಮತ್ತೆ ಸರ್ಕಾರ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಇತ್ತು. ಆದರೆ, ಈ ಸಂಬಂಧ ಉಪಮುಖ್ಯಮಂತ್ರಿ ಡಾ.‌ ಅಶ್ವತ್ಥನಾರಾಯಣ‌ ಸ್ಪಷ್ಟನೆ ನೀಡಿದ್ದು, ಇನ್ನು ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡುವುದಿಲ್ಲ ಎಂದಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇನ್ನೂ ಯಾವುದೇ ಕಾರಣಕ್ಕೂ ಲಾಕ್ ಡೌನ್ ಇರುವುದಿಲ್ಲ. ಆರ್ಥಿಕ ‌ಲಾಕ್ ಡೌನ್ ಕೂಡ ಇರುವುದಿಲ್ಲ ಎಂದಿದ್ದಾರೆ. ಕೊರೊನಾ ವೈರಸ್ ನಮ್ಮ ಜತೆಯೇ ಇರುತ್ತದೆ. ಕೋಟಿ ಕೋಟಿ ವೈರಸ್ ಗಳ ಹಾಗೆಯೇ ಕೊರೋನಾ ಕೂಡ ಒಂದು. ಜ್ವರ, ಕೆಮ್ಮು ಇಂಥದ್ದು ಕಾಣಿಸಿಕೊಂಡಾಗ ಕೂಡಲೇ ಚಿಕಿತ್ಸೆ ಪಡೆದರೆ ಉತ್ತಮ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೋನಾದಿಂದ ದೂರ ಇರಬಹುದು ಎಂದು ಹೇಳಿದರು. ಬೇರೆ ರಾಜ್ಯದವರಿಂದಲೇ ಹೆಚ್ಚು ಸೋಂಕು ಬಂದಿದೆ ಎಂದರು.

ಕೊರೋನಾ ಎದುರಿಸಲು ನಾವು ಸಿದ್ಧರಿದ್ದೇವೆ. ಮೊದಲ ಲಾಕ್ ಡೌನ್ ವೇಳೆ ಅಷ್ಟೊಂದು ಸಿದ್ಧತೆಗಳಿರಲಿಲ್ಲ. ಆದರೆ ಇದೀಗ ಅಗತ್ಯ ಸಿದ್ಧತೆಗಳಾಗಿವೆ ಎಂದು ಹೇಳಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸೋಂಕಿತರಲ್ಲಿ ಶೇ. 5ರಿಂದ 7ರಷ್ಟು ಮಾತ್ರ ಕೊರೋನಾ ಆಸ್ಪತ್ರೆ ಬೆಡ್ ಬೇಕಾಗುತ್ತದೆ. ಉಳಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಲಾಗುತ್ತದೆ ಎಂದರು.

ಇದೇ ವೇಳೆ, ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು, ಹಾಗೆ ಆದೇಶ ಮಾಡಲು ಬರಲ್ಲ. ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಲು ಹೊರಟರೆ ಎಪಿಸೋಡ್ ಗಳೇ ಆಗುತ್ತೆ ಎಂದರು. ಅಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಡಿಕೆಶಿ ಸರ್ಕಾರಕ್ಕೆ ಸಲಹೆ ಕೊಡಬಹುದಷ್ಟೇ. ಆದರೆ, ಅವರು ತೀರ್ಮಾನ ಮಾಡಲು ಬರಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

Comments are closed.