ಕರಾವಳಿ

ದ.ಕ.ಜಿಲ್ಲೆಯಲ್ಲಿಂದು 12 ಮಂದಿಗೆ ಸೋಂಕು ದೃಢ : ರಾಜ್ಯದಲ್ಲಿ 249 ಮಂದಿಯಲ್ಲಿ ಕೊರೊನಾ ಪತ್ತೆ

Pinterest LinkedIn Tumblr

ಮಂಗಳೂರು, ಜೂನ್. 22 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 12 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಇಂದು ಮತ್ತೆ ಒಂದೇ ದಿನ ಬರೋಬ್ಬರಿ 249 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಸೋಮವಾರ ಒಂದೇ ದಿನ 249 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ.

ಇದರಲ್ಲಿ ದ.ಕ. ಜಿಲ್ಲೆಯಲ್ಲಿ 12 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 445ಕ್ಕೆ ಏರಿದೆ.

ಸೋಮವಾರ ಸ್ವೀಕೃತವಾದ ಒಟ್ಟು 269 ವರದಿಗಳ ಪೈಕಿ 12 ಪಾಸಿಟಿವ್ 257 ನೆಗೆಟಿವ್ ಆಗಿದೆ. ಹೊಸ ಸೋಂಕಿತರಲ್ಲಿ 11 ಮಂದಿ ಕತರ್, ಮಸ್ಕತ್, ಸೌದಿ ಅರೇಬಿಯಾ ದೇಶಗಳಿಂದ ಆಗಮಿಸಿದ್ದರೆ, ಒಬ್ಬರು ಮಂಗಳೂರಿನ ನಿವಾಸಿಗೆ ಸೋಂಕು ತಗುಲಿದ್ದು, ಮೂಲ ಖಚಿತಪಟ್ಟಿಲ್ಲ. ಇದು ಇನ್‌ಫ್ಲೂಯೆಂಝಾ ಲೈಕ್ ಇಲ್‌ನೆಸ್ (ಐಎಲ್‌ಐ) ಪ್ರಕರಣವಾಗಿದ್ದಾಗಿ ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ. ಇವರೆಲ್ಲರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕತರ್‌ನಿಂದ ಆಗಮಿಸಿದ 64 ವರ್ಷದ ಪುರುಷ, 65 ವರ್ಷದ ಮಹಿಳೆಗೆ ಸೋಂಕು ತಗುಲಿದ್ದರೆ, ಕುವೈತ್‌ನಿಂದ ಆಗಮಿಸಿದ 42, 25, 33, 41 ವರ್ಷದ ಪುರುಷರು ಹಾಗೂ 45 ವರ್ಷದ ಮಹಿಳೆ, ಮಸ್ಕತ್‌ನಿಂದ ಬಂದ 37 ವರ್ಷದ ಪುರುಷ, ಸೌದಿ ಅರೇಬಿಯಾದಿಂದ ಆಗಮಿಸಿದ 37 ವರ್ಷದ ಪುರುಷ, ಶಾರ್ಜಾದಿಂದ ಆಗಮಿಸಿದ 44 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿದೆ.

ದ.ಕ.ಜಿಲ್ಲೆಯಲ್ಲಿ ಇಂದು 12 ಮಂದಿ ಗುಣಮುಖ:

ಜಿಲ್ಲೆಯಲ್ಲಿ ಸೋಂಕಿತರಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 250 ಮಂದಿ ಕೋರೊನದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ. ಪ್ರಸ್ತುತ 187 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 70 ಹಾಗೂ 56 ವರ್ಷದ ಪುರುಷರಿಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, 70 ವರ್ಷದ ವ್ಯಕ್ತಿಗೆ ವೆಂಟಿಲೇಟರ್ ಅಳವಡಿಸಲಾಗಿದೆ.

ರಾಜ್ಯದಲ್ಲಿ ಇಂದು 5 ಮಂದಿ ಕೊರೋನಾಕ್ಕೆ ಬಲಿ:

ರಾಜ್ಯದಲ್ಲಿ ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರು, ಬಳ್ಳಾರಿ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 142ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 126, ಕಲಬುರಗಿ 27, ವಿಜಯಪುರ 15, ಉಡುಪಿ 14, ದಕ್ಷಿಣ ಕನ್ನಡ 12, ದಾವಣಗೆರೆ 9, ಉತ್ತರ ಕನ್ನಡ ಹಾಗೂ ಬಾಗಲಕೋಟೆಯಲ್ಲಿ ತಲಾ 6, ಬೀದರ್ ಹಾಗೂ ಚಿಕ್ಕಮಗಳೂರು ತಲಾ 5, ಧಾರವಾಡ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ರಾಮನಗರ 3, ಚಿತ್ರಗುರ್ಗ, ಕೋಲಾರ, ಕೊಡಗು ಮತ್ತು ತುಮಕೂರಿನಲ್ಲಿ ತಲಾ 2, ಯಾದಗಿರಿ, ಮೈಸೂರು, ಚಿಕ್ಕಬಳ್ಳಾಪುರ, ಗದಗ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 9,399 ಕ್ಕೆ ಏರಿಕೆಯಾಗಿದೆ.

ಒಟ್ಟಾರೆ ರಾಜ್ಯದಲ್ಲಿ 9,399 ಕೊರೋನ ಸೋಂಕಿತರ ಪೈಕಿ 5,730 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 111 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 142 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,523 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಪ್ರಮುಖ ಅಂಶಗಳು :

ರಾಜ್ಯದಲ್ಲಿ ಹತ್ತು ಸಾವಿರ ಸಮೀಪಿಸುತ್ತಿರುವ ಕೊರೋನಾ ಪಾಸಿಟಿವ್

ಇಂದು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 249 ಮಂದಿಗೆ ಕೊರೋನಾ ಪಾಸಿಟಿವ್

ದಕ್ಷಿಣ ಕನ್ನಡದಲ್ಲಿ‌ ಇಂದು 12 ಮಂದಿಗೆ ಕೊರೋನಾ ಪಾಸಿಟಿವ್

ಕರ್ನಾಟಕದಲ್ಲಿ 9,399ಕ್ಕೇರಿದ ಕೊರೋನಾ ಪಾಸಿಟಿವ್

ಇಂದು ಒಟ್ಟು 5 ಮಂದಿ‌ ಕೊರೋನಾದಿಂದ ಸಾವು

Comments are closed.