ಕರ್ನಾಟಕ

ಅಕ್ಕನ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದ ಯುವತಿಗೆ ಕೊರೋನಾ ಸೋಂಕು

Pinterest LinkedIn Tumblr


ವಿಜಯಪುರ( ಜೂ. 22): ಅಕ್ಕನ ನಿಶ್ಚಿತಾರ್ಥದಲ್ಲಿ ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸಿದ್ದ 17 ವರ್ಷದ ಯುವತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಆತಂಕ ಶುರುವಾದರೆ, ವಿಜಯಪುರ ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಪ್ರಾರಂಭವಾಗಿದೆ.

ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದ ಈ ಘಟನೆ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಆಕೆಯ ಸಂಬಂಧಿಕರು ಮಾತ್ರವಲ್ಲ, ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಹಾಗೂ ವಿಜಯಪುರ ಜಿಲ್ಲಾಡಳಿತಕ್ಕೂ ತಲೆನೋವು ತಂದಿದೆ.

P-8306 ಯುವತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈಕೆಯಿಂದಲೇ ಈಗ ಆತಂಕ ಶುರುವಾಗಿದೆ. ಈ ಬಾಲಕಿಗೆ ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಬಳಿಕ ಆಕೆಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಯುವತಿಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಿದ್ದರು.

ಆದರೆ, ಹೋಂ ಕ್ವಾರಂಟೈನ್​​ಗೆ ಸೂಚಿಸಿದ್ದ ಮರುದಿನವೇ ಈಕೆಯ ಅಕ್ಕನ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಈ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಈ ಯುವತಿ ಎಲ್ಲಾ ಕಡೆ ಖುಷಿ-ಖುಷಿಯಾಗಿ ಓಡಾಡಿದ್ದಾಳೆ. ಈ ಎಂಗೇಜ್‌ಮೆಂಟ್ ಕಾರ್ಯಕ್ರಮದ ನಂತರ ಈ ಬಾಲಕಿಯ ಕೊರೋನಾ ವರದಿ ಪಾಸಿಟಿವ್ ಬಂದಿದೆ. ಇದು ಎಂಗೇಜ್​ಮೆಂಟ್ ನಡೆದವರ ಮನೆಯಲ್ಲಿ ಕೊರೋನಾ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಇರುವುದು ಗೊತ್ತಿಲ್ಲದೆ ಈಕೆ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರಿಂದ ಈಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಆತಂಕ ಶುರುವಾಗಿದೆ. ಸಂಭ್ರಮದಲ್ಲಿ ಓಡಾಡಿದ್ದ ಯುವತಿಗೆ ಈಗ ಕೊರೋನಾ ಶಾಕ್ ನೀಡಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತ್ತು ಈ ಹುಡುಗಿಯ ಸಂಪರ್ಕಕ್ಕೆ ಬಂದಿರುವ 150ಕ್ಕೂ ಹೆಚ್ಚು ಜನರಲ್ಲಿ ಈಗ ಕೊರೋನಾ ಟೆನ್ಶನ್ ಶುರವಾಗಿದೆ.

ಈ ಎಂಗೇಜ್​​​ಮೆಂಟ್ ಕಾರ್ಯಕ್ರಮಕ್ಕೆ ಬಂದಿದ್ದವರಿಗಾಗಿ ವಿಜಯಪುರ ಜಿಲ್ಲಾಡಳಿತ ಈಗ ಹುಡುಕಾಟ ಶುರು ಮಾಡಿದೆ. ಬಾಲಕಿಯ ಸಂಪರ್ಕಕ್ಕೆ ಬಂದಿದ್ದವರಲ್ಲಿ ಈಗಾಗಲೇ 130 ಜನರ ಗಂಟಲು ದ್ರವದ ಮಾದರಿಯನ್ನು ವಿಜಯಪುರ ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಇದೀಗ ಈ ಬಾಲಕಿ ವಾಸಿಸುತ್ತಿದ್ದ ಮನೆ ಸುತ್ತಲಿನ ಏರಿಯಾವನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ.ಈ ಎಂಗೇಜಮೆಂಟ್​​ಗೆ ಬಂದು ಹೋದವರು ಮತ್ತು ಇನ್ನೂ ಈ ಬಾಲಕಿಯ ಸಂಪರ್ಕಕ್ಕೆ ಬಂದಿದ್ದವರಿಗಾಗಿ ಹಾಗೂ ಇತರರಿಗಾಗಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ವಿಜಯಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಈ ಎಂಗೇಜ್‌ಮೆಂಟ್ ತೀವ್ರ ತಲೆನೋವು ತಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸುಮಾರು 130 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.