ಬೆಂಗಳೂರು (ಜೂ. 22): ಕರ್ನಾಟಕದಲ್ಲಿ ಕೊರೋನಾ ಸೋಂಕು ಶುರುವಾದ ಆರಂಭದಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ವ್ಯವಸ್ಥೆಯಿತ್ತು. ನಂತರ ಕ್ವಾರಂಟೈನ್ ನಿಯಮವನ್ನು ಸಡಿಲಗೊಳಿಸಲಾಗಿತ್ತು. ಹೊರ ರಾಜ್ಯದಿಂದ ಬಂದವರಿಗೆ ಕೂಡ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು. ಅಷ್ಟರೊಳಗೆ ಅವರಿಗೆ ರೋಗಲಕ್ಷಣಗಳು ಕಂಡುಬರದಿದ್ದರೆ ಮನೆಯಲ್ಲೇ ಕ್ವಾರಂಟೈನ್ ಆಗಲು ಅನುಮತಿ ನೀಡಲಾಗಿತ್ತು. ಆದರೆ, ಇದೀಗ ಮತ್ತೊಮ್ಮೆ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಿರುವ ಸರ್ಕಾರ ಇನ್ನುಮುಂದೆ ಹೊರರಾಜ್ಯದಿಂದ ಬಂದವರಿಗೆ 14 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಕ್ವಾರಂಟೈನ್ ನಿಯಮ ಬದಲಾವಣೆ ಕುರಿತು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಇನ್ನುಮುಂದೆ ಹೊರ ರಾಜ್ಯದವರಿಗೆ 7 ದಿನಗಳ ಬದಲಾಗಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು. ಈ ಮೊದಲು 7 ದಿನಗಳಿಗೆ ಸಡಿಲಿಕೆ ಮಾಡಲಾಗಿತ್ತು. ಇದೀಗ ಹೆಚ್ಚು ದಿನಗಳಿಗೆ ಕ್ವಾರಂಟೈನ್ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಕರ್ನಾಟಕದಲ್ಲಿ ಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯಕ್ಕೆ ಭಾರತದಲ್ಲಿ 1,74,387 ಸಕ್ರಿಯ ಕೊರೋನಾ ಕೇಸ್ಗಳಿವೆ. 2,37,195 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 13,699 ಜನರು ಸಾವನ್ನಪ್ಪಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಡಾ. ಸುಧಾಕರ್ ತಿಳಿಸಿದ್ದಾರೆ.
Comments are closed.