ಬೆಂಗಳೂರು: ರಾಜ್ಯದಲ್ಲಿ ಐಟಿಬಿಟಿ ನಮ್ಮವರು ಉತ್ತಮ ಉದ್ಯೋಗದಲ್ಲಿದ್ದಾರೆ. ಅವರು ಪಕ್ಕದ ರಾಜ್ಯಗಳಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಹಳೆಯ ಕಾಯ್ದೆಯಿಂದಾಗಿ ಅಲ್ಲಿಗೆ ಹೋಗುತ್ತಿದ್ದಾರೆ. ಹೀಗಾಗಿ ಅಂತಹವರು ಇಲ್ಲೇ ಭೂಮಿ ಖರೀದಿಸಲಿ ಅನ್ನೋದು ಆಶಯದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ. ಸಿ. ಮಾಧುಸ್ವಾಮಿ ಅವರು, ನಮ್ಮ ರಾಜ್ಯದಲ್ಲಿಯೇ ಭೂಮಿ ಖರೀದಿ ಮಾಡಿ ಬಂಡವಾಳ ಹಾಕಿದರೆ ಉಪಯೋಗ ಆಗಲಿದೆ. ಇತರರಿಗೂ ಅವಕಾಶ ಸಿಗಲಿದೆ. ಭೂಮಿ ಖರೀದಿಗೆ ಇಷ್ಟೇ ಹಣ ಎಂಬ ನಿಯಮವಿತ್ತು. ಹೀಗಾಗಿಯೇ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ಇದರೊಂದಿಗೆ ಇನ್ನು ಮುಂದೆ ರಾಜ್ಯದಲ್ಲಿ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದು ತಿಳಿಸಿದರು.
1694 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, 1307 ಆರೋಗ್ಯ ಉಪಕೇಂದ್ರಗಳನ್ನು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಸಂಪುಟದ ಒಪ್ಪಿಗೆ ನೀಡಿದೆ. ಕೆಂಗೇರಿ ಬಳಿ ಲೋಕಶಿಕ್ಷಣ ಟ್ರಸ್ಟ್ ಗೆ ಭೂಮಿ ಮಂಜೂರು, ಚಿಕ್ಕಬೇಗೂರು ಬಳಿ ಎಸ್ಟಿಇಪಿ ಫ್ಲಾಂಟ್ ಗೆ ಅನುಮೋದನೆ, ಉಡುಪಿ- ಬೈಂದೂರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ, ನಗರೋತ್ಥಾನ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದರು.
ಕೋವಿಡ್ನಿಂದಾಗಿ ಸಹಕಾರ ಸಂಘದ ಚುನಾವಣೆಗೆ ಮುಂದೂಡಲಾಗಿತ್ತು. ಇದೀಗ ಚುನಾವಣೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಕ್ಕರೆ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದವಕ್ಕೆ ಚುನಾವಣೆ ನಡೆಸಲಾಗುವುದು. 1998 ಪ್ರೊಬೆಷನರಿ ನೇಮಕಾತಿ ವಿಚಾರವಾಗಿ ಕೆಲವರಿಗೆ ಅವಕಾಶ ನೀಡಲಾಗಿತ್ತು. ಕೆಲವರು ಕೋರ್ಟ್ ನಲ್ಲಿ ಸ್ಟೇ ತಂದಿದ್ದರು. ಕೆಪಿಎಸ್ಸಿ ಸೆಲೆಕ್ಷನ್ ನಂತೆ ವೇತನ ನೀಡಲು ನಿರ್ಧರಿಸಲಾಗಿದೆ. ಓಪನ್ ಯೂನಿವರ್ಸಿಟಿ ತೆರಿಗೆ ಕಟ್ಟಲು ವಿನಾಯ್ತಿ, ಚಿಕ್ಕಮಗಳೂರಿನಲ್ಲಿ ನೂತನ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ತೀರ್ಮಾನ ಮಾಡಲಾಗಿದೆ. ಕಾಲೇಜಿಗೆ ಈ ಹಿಂದೆ ಜಮೀನು ಗುರುತಿಸಲಾಗಿತ್ತು. ಆದರೆ ಆ ಜಮೀನು ಸಾಕಾಗುತ್ತಿರಲಿಲ್ಲ. ಹೀಗಾಗಿ ಈಗ ಜಾಗ ಬದಲಾವಣೆ ಮಾಡಲಾಗಿದೆ. ತೇಗೂರು ಬಳಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ ಎಂದರು.
ರೇರಾ ಕಾಯ್ದೆ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಸೇಲ್ ಅಗ್ರಿಮೆಂಟ್ ದಾಖಲೆಯಾಗಲಿದೆ. ಗ್ರಾಹಕರಿಗೆ ಅನುಕೂಲವೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಯೇ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ಸಂಪುಟ ತೀರ್ಮಾನ ತೆಗೆದುಕೊಂಡಿದ್ದು, ಚುನಾವಣೆ ಆಗೋವರೆಗೂ ಆಡಳಿತಾಧಿಕಾರಿಗಳ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
Comments are closed.