ಕರ್ನಾಟಕ

ಪತ್ನಿಯನ್ನು ಬಿಟ್ಟು ಬರುವುದಿಲ್ಲವೆಂದು ಹಠ ಹಿಡಿದ ಕೊರೊನಾ ಸೋಂಕಿತ ಗಂಡ..!

Pinterest LinkedIn Tumblr


ಕೊಪ್ಪಳ: ಒಂದೇ ಕಾರಿನಲ್ಲಿ ಆಗಮಿಸಿದ ತಂದೆ ಹಾಗೂ ಮಗನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮೊದಲಿಗೆ ಪುತ್ರನನ್ನು ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಯ್ತು. ಬಳಿಕ ತಂದೆಗೂ ಸೋಂಕು ಖಚಿತವಾದ ಕಾರಣ ಅಧಿಕಾರಿಗಳು ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲು ಮುಂದಾದ್ರು. ಈ ವೇಳೆ, ಪತ್ನಿಯನ್ನು ಬಿಟ್ಟು ಬರೋದಿಲ್ಲ ಎಂದು ಸೋಂಕಿತ ಪತಿ ಹಠ ಮಾಡಿದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಮುಂಬಯಿಯ ದಿವಾ ಏರಿಯಾದಿಂದ ತಂದೆ, ತಾಯಿ ಹಾಗೂ ಮಗ ಮೂವರು ಖಾಸಗಿ ಕಾರಿನಲ್ಲಿ ಜಿಲ್ಲೆಯ ಕನಕಗಿರಿಗೆ ಮೇ 31ರಂದು ಆಗಮಿಸಿದ್ದಾರೆ. ಮೂವರನ್ನು ಕನಕಗಿರಿಯ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಜೂನ್‌ 2ರಂದು ಪುತ್ರನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಪುತ್ರನನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಚ್ಚರಿ: ಪುತ್ರನ ಪ್ರಾಥಮಿಕ ಸಂಪರ್ಕ ಹೊಂದಿರುವ ತಂದೆ, ತಾಯಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೊಪ್ಪಳದ ಕಿಮ್ಸ್‌ನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ತಂದೆಯ ವರದಿ ಪಾಸಿಟಿವ್‌ ಬಂದರೆ, ತಾಯಿಯ ವರದಿ ನೆಗಟಿವ್‌ ಬಂದಿದೆ. ಮೂವರು ಒಂದೇ ವಾಹನ ಹಾಗೂ ಕೊಠಡಿಯಲ್ಲಿದ್ದರೂ ಇಬ್ಬರಿಗೆ ಸೋಂಕು ತಗುಲಿ ಮತ್ತೊಬ್ಬರಿಗೆ ಬಂದಿಲ್ಲ.

ಪುತ್ರನಿರುವ ಕೋವಿಡ್‌ ಆಸ್ಪತ್ರೆಗೆ 50 ವರ್ಷದ ತಂದೆಯನ್ನು ದಾಖಲಿಸಲು ಜಿಲ್ಲಾಡಳಿತ ಮುಂದಾದ ವೇಳೆ, ತಂದೆ ತಕರಾರು ತೆಗೆದಿದ್ದಾನೆ. ಪತ್ನಿ ಬಿಟ್ಟು ತಾನು ಬರುವುದಿಲ್ಲ. ಪತ್ನಿಯೊಂದಿಗೆ ಇರುವೆ ಎಂದು ಹಠ ಹಿಡಿದಿದ್ದು, ಅಧಿಕಾರಿಗಳಿಗೆ ತಲೆನೋವಾಗಿತ್ತು. ಕೊನೆಗೆ ಆತನ ಮನವೊಲಿಸಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಗಿರಿಯ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ತಾಯಿ ಒಬ್ಬರೇ ಇದ್ದಾರೆ.

ಕನಕಗಿರಿಯ ಕ್ವಾರಂಟೈನ್‌ನಲ್ಲಿದ್ದ ತಂದೆ, ಮಗನಿಗೆ ಸೋಂಕು ದೃಢಪಟ್ಟಿದೆ. ಮೊದಲು ಮಗನಿಗೆ ಸೋಂಕು ಕಂಡುಬಂದಿತ್ತು. ತಂದೆಯನ್ನು ಕೋವಿಡ್‌-19 ಆಸ್ಪತ್ರೆ ಸೇರಿಸಲು ಮುಂದಾದ ವೇಳೆ ಪತ್ನಿ ಬಿಟ್ಟು ಬರಲು ಒಪ್ಪಲಿಲ್ಲ. ಆತನ ಮನವೊಲಿಸಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ್ ತಿಳಿಸಿದ್ದಾರೆ.

Comments are closed.