ಕರ್ನಾಟಕ

ಕೊರೊನಾ ಹಿನ್ನೆಲೆ ವಿಧಾನ ಪರಿಷತ್‌ನ 4 ಸ್ಥಾನಗಳ ಚುನಾವಣೆ ಮುಂದೂಡಿಕೆ

Pinterest LinkedIn Tumblr


ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಬೇಡ ಎಂದು ಆಯೋಗ ಈ ತೀರ್ಮಾನಕ್ಕೆ ಬಂದಿದೆ.

ಜೂನ್ 30ಕ್ಕೆ 2 ಪದವೀಧರ ಕ್ಷೇತ್ರ ಹಾಗೂ 2 ಶಿಕ್ಷಕರ ಕ್ಷೇತ್ರದ ಪರಿಷತ್ ಸ್ಥಾನಗಳ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿದೆ. ಹಾಲಿ ಸದಸ್ಯರ ಅಧಿಕಾರಾವಧಿ ಮುಗಿಯುವ ಒಳಗಡೆ ಚುನಾವಣೆ ನಡೆಸಬೇಕಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಪರಿಷತ್‌ ಎಲೆಕ್ಷನ್‌ನ್ನು ಮುಂದೂಡಲಾಗಿದೆ.

ಚುನಾವಣಾ ಮುಂದೂಡಿ ಆದೇಶ ಹೊರಡಿಸಿರುವ ಚುನಾವಣಾ ಆಯೋಗ, ಕೇಂದ್ರ ಸರಕಾರ ಲಾಕ್‌ಡೌನ್‌ನ್ನು ಜೂನ್ 30, 2020ರವರೆಗೆ ವಿಸ್ತರಿಸಿದೆ. ಇದರ ಜೊತೆ ಹೆಚ್ಚಿನ ಜನ ಸೇರುವುದಕ್ಕೂ ಕೂಡ ನಿರ್ಬಂಧ ವಿಧಿಸಲಾಗಿದೆ. ಚುನಾವಣೆ ಘೋಷಿಸಿದರೆ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಲಿದ್ದು, ಪ್ರಚಾರದಲ್ಲಿ ಅಭ್ಯರ್ಥಿಗಳು ಮತದಾರರೊಂದಿಗೆ ಮಾತನಾಡಬೇಕಾಗುತ್ತದೆ ಎಂದು ಚುನಾವಣೆ ಮುಂದೂಡಲಾಗಿದೆ.

ಚುನಾವಣೆ ಮುಂದೂಡಿ ಆಯೋಗದ ಆದೇಶ

ಮತದಾನ ಪ್ರಕ್ರಿಯೆಯಲ್ಲೂ ಹೆಚ್ಚಿನ ಜನ ಸೇರುವ ದೃಷ್ಟಿಯಿಂದ ಆಯೋಗ ಈ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮೊದಲು ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಗ್ರಾಮ ಪಂಚಾಯತಿ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿತ್ತು. ಇನ್ನು, ಇದೇ ಅವಧಿಯಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯೂ ಕೂಡ ಭಾಗಶಃ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಅಧಿಕೃತ ಆದೇಶ ಬಾಕಿ ಇದೆ.

Comments are closed.