ಕರ್ನಾಟಕ

ಕೊರೊನಾ ವೈರಸ್ ಶೂನ್ಯಸ್ಥಿತಿಗೆ ತಲುಪುವವರೆಗೂ ಆರಂಭಿಸಬೇಡಿ: ಪೋಷಕರ ಆನ್‌ಲೈನ್‌ ಅಭಿಯಾನ

Pinterest LinkedIn Tumblr


ಬೆಂಗಳೂರು: ಕೇಂದ್ರ ಸರ್ಕಾರ ಶಾಲೆಗಳನ್ನು ಆರಂಭಿಸುವ ಸಂಬಂಧ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳ ಕೈಗೆ ಕೊಟ್ಟಿದೆ. ಹೀಗಾಗಿ, ಆಯಾ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ. ರಾಜ್ಯದ ಮಟ್ಟಿಗೆ ಹೇಳೋದಾದ್ರೆ, ಜುಲೈ ಮೊದಲ ವಾರದ ವೇಳೆಗೆ ಶಾಲಾ-ಕಾಲೇಜುಗಳು ಆರಂಭ ಆಗುವ ಲಕ್ಷಣಗಳಿವೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದೆ..!

ಕೊರೊನಾ ವೈರಸ್ ರಾಜ್ಯದಲ್ಲಿ ಶೂನ್ಯಕ್ಕೆ ಇಳಿಯುವವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸಬಾರದು ಅನ್ನೋದು ಪೋಷಕರ ಒತ್ತಾಯ. ಇನ್ನೊಂದೆಡೆ, ಕೊರೊನಾ ವೈರಸ್‌ಗೆ ಲಸಿಕೆ ಸಿದ್ದವಾಗುವವರೆಗೂ ಶಾಲಾ-ಕಾಲೇಜುಗಳನ್ನು ಆರಂಭಿಸಬಾರದು ಅನ್ನೋ ಒತ್ತಡವೂ ಇದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಶೂನ್ಯಕ್ಕೆ ಇಳಿಯುವವರೆಗೂ ಶಾಲಾ ಕಾಲೇಜುಗಳನ್ನು ಆರಂಭಿಸಬಾರದು ಎಂದು ಒತ್ತಾಯಿಸುತ್ತಿರುವ ಪೋಷಕರು, ಚಿಕ್ಕಮಕ್ಕಳು ಹೊರಗೆ ಹೋದಾಗ ಅತ್ಯಂತ ಸುಲಭವಾಗಿ ಸೋಂಕಿಗೆ ತುತ್ತಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಶಾಲೆಯಿಂದ ಮನೆಗೆ ಸೋಂಕನ್ನು ಹೊತ್ತು ತಂದರೆ ಮನೆಯಲ್ಲಿ ಇರುವ ವಯೋವೃದ್ಧರೂ ಅದರಿಂದ ತೊಂದರೆಗೆ ಈಡಾಗುತ್ತಾರೆ ಅನ್ನೋದು ಪೋಷಕರ ಆತಂಕ.

ಸಾಮಾಜಿಕ ಜಾಲತಾಣಗಳಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವ ಈ ಪೋಷಕರು, ತಮ್ಮದೇ ಆದ ಗ್ರೂಪ್‌ ರಚಿಸಿಕೊಂಡಿದ್ಧಾರೆ. ಸರ್ಕಾರಕ್ಕೆ ಆನ್‌ಲೈನ್ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈವರೆಗೆ 5 ಲಕ್ಷ ಪೋಷಕರ ಸಹಿ ಸಂಗ್ರಹ ಕಾರ್ಯ ನಡೆದಿದೆ. ಬೆಂಗಳೂರು ಹಾಗೂ ರಾಜ್ಯಾದ್ಯಂತ ಇರುವ ಪೋಷಕರು ಸಹಿ ಹಾಕಿದ್ದು, ಕೊರೊನಾ ವೈರಸ್ ಶೂನ್ಯಕ್ಕೆ ಕುಸಿಯುವವರೆಗೂ ಶಾಲೆ ಆರಂಭಿಸಬೇಡಿ ಎಂದು ಆಗ್ರಹಿಸುತ್ತಿದ್ದಾರೆ.

ರಾಜ್ಯದಲ್ಲೀಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದಿನವೊಂದಕ್ಕೆ ಸರಿಸುಮಾರು 300 ಸೋಂಕಿತರು ಪತ್ತೆಯಾಗಿದ್ದೂ ಇದೆ. ಹೀಗಾಗಿ, ಆನ್‌ಲೈನ್‌ ಪಿಟಿಷನ್ ಚಳುವಳಿ ಆರಂಭವಾಗಿದ್ದು, ಮಕ್ಕಳ ಜೀವದ ಜೊತೆ ಚಲ್ಲಾಟವಾಡಬೇಡಿ ಎಂದು ಸರ್ಕಾರವನ್ನು ಪೋಷಕರು ಆಗ್ರಹಿಸುತ್ತಿದ್ಧಾರೆ.

ಮಕ್ಕಳ ಸುರಕ್ಷತೆ ಇಲ್ಲವಾದ್ರೆ ಶಾಲೆಗೆ ಕಳಿಸೋದು ಹೇಗೆ? ಮೂರ್ಖತನದ ನಿರ್ಧಾರಗಳನ್ನು ಕೈಗೊಂಡರೆ ಸುಮ್ಮನಿರೋದಿಲ್ಲ ಎಂದು ಪೋಷಕರು ಎಚ್ಚರಿಸಿದ್ಧಾರೆ. ಆನ್‌ಲೈನ್ ಮೂಲಕವೇ ಇನ್ನಷ್ಟು ದಿನ ಶಿಕ್ಷಣ ಮುಂದುವರೆಸಿ ಎಂದೂ ಪೋಷಕರು ಆಗ್ರಹಿಸುತ್ತಿದ್ದಾರೆ.

Comments are closed.