ಕರ್ನಾಟಕ

ಕೊರೋನಾದಿಂದ ದೂರವಿರಲು ಶಿವಮೊಗ್ಗ ಯುವಕನ ಹೊಸ ಸಾಧನ

Pinterest LinkedIn Tumblr


ಶಿವಮೊಗ್ಗ(ಮೇ.29): ಕೊರೋನಾ ಈ ಹೆಸರು ಕೇಳಿದಾಕ್ಷಣ ಒಂದು ಬಾರಿಗೆ ಮೈ ನಡುಗುವಂತಾಗುತ್ತದೆ. ಈ ಹೆಸರು ಕೇಳಿ ಕೇಳಿ ಸಾಕಾಗಿದೆ. ಈ ಕೊರೋನಾ ಎನ್ನುವ ಮಹಾಮಾರಿ ಇಡೀ ವಿಶ್ವದಲ್ಲಿಯೇ, ತಲ್ಲಣಗೊಳಿಸಿದೆ. ಹೇಗಪ್ಪಾ ಇದರಿಂದ ಮುಕ್ತಿ ಪಡೆಯೋದು ಎನ್ನುವಂತಾಗಿದೆ. ಕುಗ್ರಾಮದವರೆಗೂ ಈ ಕೊರೋನಾದ್ದೇ ಹಾವಳಿಯಾಗಿದೆ. ಪುಟ್ಟ ಹಳ್ಳಿಗಳಲ್ಲು ಜನರು ಭೀತಿಗೊಳ್ಳುವಂತೆ ಮಾಡಿದೆ. ಎಲ್ಲಿಯಾದರೂ ಹೋದ್ರೆ, ಏನನ್ನೂ ಮುಟ್ಟಲು ಹೆದರಿಕೆ. ಯಾವುದಾದರೂ ಕಚೇರಿ, ಆಸ್ಪತ್ರೆ, ಎಟಿಎಂ ಕಡೆ ಪಕ್ಷ ನಮ್ಮ ಕಾರಿನ ಡೋರ್ ತೆಗೆಯಲು ಕೂಡ ನಾವು ಮುಟ್ಟಲು ಹಿಂಜರಿಕೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೆದರಿಕೆಯಿಂದ ದೂರವಿರಲು ಶಿವಮೊಗ್ಗದ ಒಬ್ಬ ಯುವಕ ಹೊಸ ಸಾಧನ ಪರಿಚಯಿಸುತ್ತಿದ್ದಾರೆ.

ಶಿವಮೊಗ್ಗದ ಯುವಕ ರಾಕೇಶ್, ಈ ಸಾಧನಕ್ಕೆ ಸುರಕ್ಷಾ ಕೀ ಎಂದು ಹೆಸರು ಇಟ್ಟಿದ್ದಾರೆ. ಈ ಸಾಧನದ ಮೂಲಕ ನೀವು ಏನನ್ನಾದರೂ ಮುಟ್ಟ ಬಹುದಾಗಿದೆ. ಆಸ್ಪತ್ರೆಯ ಡೋರ್ ನಿಂದ ಹಿಡಿದು ಎಟಿಎಂ, ಡೋರ್ ನಿಂದ ಹಿಡಿದು, ಕಾರಿನ ಡೋರ್ ಕೂಡ ಯಾವುದೇ ಹೆದರಿಕೆಯಿಲ್ಲದೇ ತೆರೆಯಲು ಈ ಸುರಕ್ಷಾ ಕೀ ಸಾಧನ ಬೆಸ್ಟ್ ಆಗಿದೆ. ಇಷ್ಟೇ ಅಲ್ಲ, ಕೊರೋನಾ ವಾರಿಯರ್ಸ್ ಗಳಾಗಿರುವ ವೈದ್ಯಕೀಯ ಸಿಬ್ಭಂದಿಗಳು ಮತ್ತು ಪೊಲೀಸರು ಈ ಸುರಕ್ಷಾ ಕೀ ಯನ್ನು ಬಳಸಬಹುದಾಗಿದೆ.

ರಸ್ತೆಯಲ್ಲಿ ನಿಲ್ಲಿಸಲಾಗುವ ವಾಹನಗಳ ತಪಾಸಣೆ ಸಂದರ್ಭದಲ್ಲಿ, ಅವರ ಬ್ಯಾಗುಗಳು, ಡಿ.ಎಲ್, ಆಧಾರ್ ಕಾರ್ಡ್ ಚೆಕ್ ಮಾಡುವ ಸಂದರ್ಭದಲ್ಲಿ ಕೈಯನ್ನು ಬಳಸದೇ, ಈ ಸಾಧನದ ಮೂಲಕ ಅವೆಲ್ಲವನ್ನೂ ಚೆಕ್ ಮಾಡಬಹುದಾಗಿದೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಈ ಕೀ ಸೇಫರ್ ಸೈಡ್ ಆಗಿದೆ. ಅಂದಹಾಗೆ, ಈ ಸುರಕ್ಷಾ ಕೀ ಸಾಧನವನ್ನು ಸಿಇಡಿ ಲ್ಯಾಬ್ ತುಮಕೂರಿನಲ್ಲಿ ರೆಡಿ ಮಾಡಿದ್ದಾರೆ. ಫೈಬರ್ ಪ್ಲಾಸ್ಟಿಕ್ ಬಳಸಿ, ಈ ಸಾಧನವನ್ನು ತಯಾರಿಸಿದ್ದಾರೆ. ಅಷ್ಟಕ್ಕೂ, ಕೋವಿಡ್-19 ಎಂಬ ಸಂಧಿಗ್ಧ ಪರಿಸ್ಥಿತಿಯಲ್ಲಿ, ಏನನ್ನೂ ಮುಟ್ಟಲು ಭಯಪಡುವ ಇಂತಹ ಕ್ಲಿಷ್ಟ ಸಂದರ್ಭದಲ್ಲಿ, ಈ ಸಾಧನ ವಿವಿಧ ಕೋನಗಳಿಂದ ಬಳಕೆಗೆ ಅನುಕೂಲವಾಗಿದೆ.

ಮನೆಯಲ್ಲಿ ಬರುವ ಡೋರ್ ಡಿಲೆವರಿ ಬಾಯ್ ನಿಂದ ಹಿಡಿದು, ಮನೆಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ವ್ಯಕ್ತಿಗೂ ಈ ಸಾಧನ ಅನುಕೂಲಕರವಾಗಿದೆ. ಇಷ್ಟೇ ಅಲ್ಲ, ಎಟಿಎಂ ನಲ್ಲಿರುವ ಬಟನ್ ಗಳನ್ನು ಪ್ರೆಸ್ ಮಾಡಲು ಒಂದು ಸ್ಲಾಟ್ ನೀಡಲಾಗಿದ್ದು, ಇದು ಕೂಡ ಬಳಕೆಗೆ ಅನುಕೂಲವಾಗಿದೆ. ಇದರ ಜೊತೆಗೆ ನಾವು ಕರ್ತವ್ಯ ನಿರ್ವಹಿಸುವ ಕಚೇರಿಗಳಲ್ಲಿಯೂ, ಬೇರೆಯವರು ಮುಟ್ಟಿರುವ ವಸ್ತುಗಳನ್ನು ಬಾಗಿಲುಗಳನ್ನು ತೆರೆಯಲು ಈ ವಿಶೇಷ ಸುರಕ್ಷಾ ಕೀ ಸಾಧನ, ಬಳಸಬಹುದಾಗಿದೆ. ಈ ಮೂಲಕ, ಕೊರೊನಾದಿಂದ ಸ್ವಲ್ಪ ಮಟ್ಟಿಗಾದರೂ ದೂರವಿರಲು ಈ ವಿಶೇಷ ಸಾಧನ, ಸಹಕಾರಿಯಾಗಲಿದೆ.

ಒಟ್ಟಾರೆ ಜನಸ್ನೇಹಿಯಾಗಿರುವ ಈ ಸಾಧನವನ್ನು, ಕೊರೋನಾ ಸೋಂಕಿನಿಂದ ದೂರವಿರಲು ಸಹಕಾರಿಯಾಗಿದೆ. ಸ್ಯಾನಿಟೈಸರ್, ಮಾಸ್ಕ್ ಜೊತೆಗೆ ಇದನ್ನು ಬಳಸಿ, ಈ ಸೋಂಕಿನಿಂದ ಇನ್ನಷ್ಟು ದೂರವಿರಲು ಪ್ರಯತ್ನಿಸಬಹುದಾಗಿದೆ

Comments are closed.