ಕರ್ನಾಟಕ

ಡಿಸೆಂಬರ್ ವೇಳೆಗೆ ದೇಶದ ಅರ್ಧದಷ್ಟು ಜನರಿಗೆ ಕೊರೋನಾ ಸೋಂಕು: ನಿಮ್ಹಾನ್ಸ್ ವೈರಾಣು ತಜ್ಞ

Pinterest LinkedIn Tumblr


ಬೆಂಗಳೂರು: ಡಿಸೆಂಬರ್ ವೇಳೆಗೆ ಭಾರತದಲ್ಲಿರುವ ಶೇ.50ರಷ್ಟು ಜನರು ಕೊರೋನಾ ಸೋಂಕಿಗೊಳಗಾಗಲಿದ್ದಾರೆಂದು ನಿಮ್ಹಾನ್ಸ್’ನ ನ್ಯೂರೋ ವೈರಾಲಜಿ ವಿಭಾಗದ ಹಿರಿಯ ಪ್ರೊಫೆಸರ್ ಡಾ.ವಿ.ರವಿಯವರು ಹೇಳಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಪ್ರಮುಖವಾಗಿ ಲಾಕ್ಡೌನ್ ಸಡಿಲಗೊಂಡ ಬಳಿಕವಷ್ಟು ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೊರೋನಾ ಸಮುದಾಯ ಹಂತ ತಲುಪಬಹುದು ಎಂದು ಹೇಳಿದ್ದಾರೆ.

ಡಿಸೆಂಬರ್ ಅಂತ್ಯದೊಳಗೆ ಭಾರತದ ಶೇ.50ರಷ್ಟು ಮಂದಿ ಕೊರೋನಾ ಸೋಂಕಿಗೊಳಗಾಗಲಿದ್ದಾರೆ. ಈ ನಡವೆ ಉತ್ತಮವಾದ ವಿಚಾರವೆಂದರೆ, ಸೋಂಕಿಗೊಳಗಾಗಿದ್ದೇನೆಂಬ ವಿಚಾರ ಶೇ.90ರಷ್ಟು ಜನರಿಗೆ ಗೊತ್ತಿರುವುದೇ ಇಲ್ಲ ಎಂದು ತಿಳಿಸಿದ್ದಾರೆ.

ಶೇ..5-10 ರಷ್ಟು ಜನರಿಗೆ ಮಾತ್ರ ಕೃತಕ ಆಕ್ಸಿಜನ್ ನೀಡಲಾಗುತ್ತದೆ. ಹಾಗೂ ಶೇ.5ರಷ್ಟು ಜನರಿಗೆ ವೆಂಟಿಲೇಟರ್ ಸಪೋರ್ಟ್ ಅಗತ್ಯವಿರುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಲಾಕ್’ಡೌನ್ 4.0 ಕೊನೆಗೊಳ್ಳಲಿದ್ದು, ಈ ವೇಳೆ ಪ್ರಕರಣಗಳ ಹೆಚ್ಚಳವನ್ನು ನಿಭಾಯಿಸಲು ರಾಜ್ಯ ಸರ್ಕಾರ ವೈದ್ಯಕೀಯ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿಕೊಳ್ಳುವುದು ಮುಖ್ಯವಾಗಿದೆ. ವಿಶೇಷವಾಗಿ ತೀವ್ರವಾಗ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯ ಸಿದ್ಧತೆಗಳು ಅಗತ್ಯವಿರುತ್ತದೆ.

ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಕಾರಣದಿಂದಲೇ ಕೇಂದ್ರ ಸರ್ಕಾರ ಈ ಹಿಂದೆಯೇ ಪ್ರತೀ ಜಿಲ್ಲೆಯಲ್ಲೂ ಕೊರೋನಾ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡುವಂತೆ ಸೂಚಿಸಿದೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿನ ಪ್ರಯೋಗಾಲಯಕ್ಕೆ ಕೊರೋನಾ ಪರೀಕ್ಷೆ ಮಾಡಲು ಅನುಮತಿ ನೀಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ಸಿಗುತ್ತಿದ್ದು, ಈ ಬಗ್ಗೆ ಬಹಳ ಸಂತೋಷವಿದೆ. ಜೂನ್.15ರೊಳಗಾಗಿ ಕರ್ನಾಟಕದಲ್ಲಿ ಪ್ರಯೋಗಾಲಯಗಳ ಸಂಖ್ಯೆ 75ಕ್ಕೆ ಏರಿಕೆಯಾಗಬೇಕೆಂಬುದು ನನ್ನ ಕನಸಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ ಶೇ.3-4 ರಷ್ಟಿದೆ. ಆದರೆ, ಈಗಾಗಲೇ ಗುಜರಾತ್ ರಾಜ್ಯದಲ್ಲಿ ಶೇ.6ಕ್ಕೆ ತಲುಪಿದೆ. ಕೊರೋನಾ ಲಸಿಕೆಗಾಗಿ ಮುಂದಿನ ವರ್ಷ ಮಾರ್ಚ್ ತಿಂಗಳವರೆಗೂ ನಾವು ಕಾಯಲೇಬೇಕಿದೆ. ಕೊರೋನಾ ಜೊತೆಗೆ ಬದುಕುವುದನ್ನು ಜನರು ಕಲಿಯಲೇಬೇಕು. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎಬೋಲಾ, ಸಾರ್ಸ್ ನಂತಹ ಡೆಡ್ಲಿ ವೈರಸ್ ಕೊರೋನಾ ಅಲ್ಲ ಎಂದಿದ್ದಾರೆ.

Comments are closed.