ಕರ್ನಾಟಕ

ಬೆಂಗಳೂರಿನಿಂದ ಚಿತ್ರದುರ್ಗದ ಊರಿಗೆ ಬಂದ ಪೊಲೀಸ್​​ಗೆ ಕೊರೋನಾ

Pinterest LinkedIn Tumblr


ಚಿತ್ರದುರ್ಗ(ಮೇ.25): ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಬೆಂಗಳೂರಿನ ಪೊಲೀಸ್​​ ಸಿಬ್ಬಂದಿಯೊಬ್ಬರು ಚಿತ್ರದುರ್ಗಕ್ಕೆ ಆತಂಕ ತಂದೊಡ್ಡಿದ್ದಾರೆ. ಇಲ್ಲಿನ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಪೊಲೀಸ್ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೀಗ, ರಜೆ ಮೇಲೆ ಊರಿಗೆ ಬಂದ ಇವರು ಇಡೀ ಗ್ರಾಮಕ್ಕೆ ಕೊರೋನಾ ಭೀತಿ ಸೃಷ್ಟಿಸಿದ್ದಾರೆ.

ಇತ್ತೀಚೆಗೆ ಮೇ 2ನೇ ತಾರೀಕಿನಂದು ಸ್ವಗ್ರಾಮಕ್ಕೆ ಬಂದು ಇವರು ನಾಲ್ಕೈದು ದಿನ ಇಲ್ಲೇ ಕಳೆದಿದ್ದರು. ಮೇ 2ರಿಂದ 6ರ ತನಕ ಜಾನಕಲ್ ಗ್ರಾಮದಲ್ಲಿದ್ದ ಪೊಲೀಸ್​​ ತನ್ನ ಪತ್ನಿಯ ತವರೂರು ಹೊಳಲ್ಕೆರೆ ತಾಲ್ಲೂಕಿನ ಗಟ್ಟಿ ಹೊಸಹಳ್ಳಿಗೂ ಭೇಟಿ ನೀಡಿದ್ದರು. ಈ ನಡುವೆ ಸಂಬಂಧಿಕರ ಯುವಕನೊಬ್ಬನ ಹುಟ್ಟುಹಬ್ಬದ ಆಚರಣೆಯಲ್ಲೂ ಪಾಲ್ಗೊಂಡಿದ್ದ ಈ ಪೊಲೀಸ್​​ ಸಿಬ್ಬಂದಿಗೆ ಈಗ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಸದ್ಯ ಪೊಲೀಸ್​​ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರನ್ನೂ ಚಿತ್ರದುರ್ಗ ಜಿಲ್ಲಾಡಳಿತ ಕ್ವಾರೆಂಟೈನ್ ಮಾಡಿದೆ. ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮದ 15 ಜನರು ಕ್ವಾರೆಂಟೈನ್​​ಗೆ ಒಳಗಾಗಿದ್ದಾರೆ. ಜಾನಕಲ್ ಗ್ರಾಮದ 12 ಜನರು ಸಾಂಸ್ಥಿಕ ಕ್ವಾರೆಂಟೈನ್​​​ನಲ್ಲಿದ್ದು, ಇವರ ತಾಯಿ, ಮಗು ಮತ್ತು ವೃದ್ದನಿಗೆ ಹೋಂ ಕ್ವಾರಂಟೈನ್​​ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 11 ಶ್ರಮಿಕ ರೈಲು – ತಾಯ್ನಾಡಿಗೆ 16,500 ವಲಸಿಗರು ವಾಪಸ್​​

ಹಾಗೆಯೇ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದ ಹೊಸಹಳ್ಳಿ ಗ್ರಾಮದಲ್ಲಿ ತನ್ನ ಪತ್ನಿ, ಇಬ್ಬರು ಮಕ್ಕಳು, ಅತ್ತೆ ಮತ್ತಲವು ಕುಟುಂಬಸ್ಥರನ್ನು ಕೂಡ ಕ್ವಾರಂಟೈನ್​​ ಮಾಡಲಾಗಿದೆ. ಇದರಿಂದ ಇಷ್ಟು ನೆಮ್ಮದಿಯಾಗಿದ್ದ ಗ್ರಾಮೀಣ ಪ್ರದೇಶದ ಜನರಿಗೆ ಕೊರೋನಾ ಸೋಂಕಿತ ಭೀತಿ ಶುರುವಾಗಿದೆ.

ಇನ್ನು, ಜಿಲ್ಲಾಡಳಿತ ಎರಡು ಗ್ರಾಮಗಳ ಮೇಲೂ ಹದ್ದಿನ ಕಣ್ಣಿಟ್ಟಿದೆ. ಜತೆಗೆ ಮುಂಜಾಗೃತ ಕ್ರಮವಾಗಿ ಪೊಲೀಸ್​ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಬಂಧ ಹೊಂದಿದ್ದ ಎಲ್ಲರನ್ನು ಕ್ವಾರಂಟೈನ್ ಮಾಡಿದೆ. ಇನ್ನುಳಿದವರನ್ನು ಆರೋಗ್ಯ ಇಲಾಖೆಯವರು ಕೋವಿಡ್​​-19 ತಪಾಸಣೆಗೆ ಒಳಪಡಿಸಿದ್ದಾರೆ.

Comments are closed.