ಕರ್ನಾಟಕ

ಲಾಕ್‌ಡೌನ್‌ನಿಂದ ಮದುವೆ ವಿಳಂಬ; ಯುವಕ ಆತ್ಮಹತ್ಯೆ

Pinterest LinkedIn Tumblr

ಹುಬ್ಬಳ್ಳಿ(ಮೇ.25): ಲಾಕ್ ‌ಡೌನ್‌ನಿಂದ ಮದುವೆ ವಿಳಂಬ ಆಗಿದ್ದಕ್ಕೆ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.‌ ನಗರದ ದೇವಾಂಗ ಪೇಟೆ ನಿವಾಸಿ ಶರಣಪ್ಪ ಫಕ್ಕೀರಪ್ಪ ಹಡಪದ (29) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ಗುರುತಿಸಲಾಗಿದೆ.

ಶರಣಪ್ಪನಿಗೆ ಈಗಾಗಲೇ ಮದುವೆ ನಿಶ್ಚಯವಾಗಿತ್ತು. ಆದರೆ, ಮನೆಯವರೆಲ್ಲ ಲಾಕ್‌ಡೌನ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಲಾಕ್‌ಡೌನ್ ಇರುವ ಕಾರಣ ಕಠಿಣ ನಿಬಂಧನೆಗಳಿವೆ. ಬಂಧು ಬಳಗದವರನ್ನೆಲ್ಲ ಕರೆಯಲು ಅನಾನುಕೂಲತೆ ಆಗುತ್ತೆ‌. ಸ್ವಲ್ಪ ದಿನ ಕಾಯ್ದು ನೋಡಿ ವಿವಾಹ ದಿನಾಂಕ ನಿಗದಿ ಪಡಿಸೋಣ ಎಂದಿದ್ದರು. ಇದರಿಂದ ಮನನೊಂದ ಶರಣಪ್ಪ ಮದುವೆ ಮಾಡಿಸಲೇಬೇಕು ಎಂದು ಹಠ ಹಿಡಿದಿದ್ದ ಎನ್ನಲಾಗಿದೆ.

ಕುಟುಂಬದ ಸದಸ್ಯರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ. ಕೋಪಗೊಂಡು ಹೋಗಿದ್ದಾನೆ ಮರಳಿ ಬರುತ್ತಾನೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ಒಂದು ದಿನವಾದರೂ ಶರಣಪ್ಪ ಮನೆಗೆ ಬರದಿದ್ದಾಗ ತೀವ್ರ ಹುಡುಕಾಟ ನಡೆಸಿದ್ದಾರೆ. ಸ್ನೇಹಿತರು ಸಂಬಂಧಿಗಳನ್ನೆಲ್ಲಾ ವಿಚಾರಿಸಿದ್ದಾರೆ. ಆದರೆ, ಶರಣಪ್ಪ ಎಲ್ಲಿಯೂ ಸಿಗದಿದ್ದಾಗ ಅನುಮಾನಗೊಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟರಲ್ಲಾಗಲೇ ಆತುರಗಾರನಿಗೆ ಬುದ್ಧಿಮಟ್ಟ ಎನ್ನುವಂತೆ ಶರಣಪ್ಪ ಜೀವ ಕಳೆದುಕೊಂಡಿದ್ದಾನೆ. ಸಂತೋಷ್ ನಗರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆರೆಯಲ್ಲಿ ಶರಣಪ್ಪನ ಮೃತದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಶರಣಪ್ಪನ ದುಡುಕಿನ ನಿರ್ಧಾರಕ್ಕೆ ಮನೆಯವರು ಗೋಳಾಡುವಂತಾಯಿತು. ಸಂತೋಷದಿಂದ ತುಂಬಿದ್ದ ಮನೆ ಸೂತಕದ ಮನೆಯಾಯಿತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಶೋಕ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದು ತನಿಖೆ ಮುಂದುವರಿಸಿದ್ದಾರೆ.

Comments are closed.