ಕರ್ನಾಟಕ

ಮಹಾರಾಷ್ಟ್ರ ಸೇರಿದಂತೆ 6 ಹೈರಿಸ್ಕ್ ರಾಜ್ಯಗಳಿಂದ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್!

Pinterest LinkedIn Tumblr

ಬೆಂಗಳೂರು: ಸೋಂಕು ಪ್ರಕರಣ ಹೆಚ್ಚಿರುವ ಮಹಾರಾಷ್ಟ್ರ ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಸೇವಾ ಸಿಂಧು ವೆಬ್ ಸೈಟಿನಲ್ಲಿ ನೋಂದಣಿ ಮಾಡಿಕೊಂಡು ಕರ್ನಾಟಕಕ್ಕೆ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಿ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಅನ್ಯ ರಾಜ್ಯಗಳಿಂದ ವಾಪಸ್ಸಾಗುವ ಎಳ್ಲರಿಗೂ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನಗಳ ಹೋಂ ಕ್ವಾರಂಟೈನ್ ವಿಧಿಸಿದ್ದ ಆದೇಶವನ್ನು ಹಿಂಪಡೆದಿದ್ದು, ಹೆಚ್ಚು ಸೋಂಕು ಪ್ರಕರಣ ಹೊಂದಿರುವ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಆಗಮಿಸುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನಗಳ ಹೋಂ ಕ್ವಾರಂಟೈನ್ ವಿಧಿಸಲು ನಿರ್ಧರಿಸಲಾಗಿದೆ.

ಉಳಿದಂತೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿ 5 ಅಥವಾ 7ನೇ ದಿನ ಅವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇನ್ನು ಸೋಂಕು ಹೆಚ್ಚಿರುವ 6 ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಿಂದ ಆಗಮಿಸುವವರಿಗೆ 14 ದಿನಗಳ ಹೋಂ ಕ್ವಾರಂಟೈನ್ ವಿಧಿಸಲಾಗುವುದು. ಈ ವೇಳೆ ಅವರ ಮೇಲೆ ಸ್ಥಳೀಯ ಆರೋಗ್ಯ ಸಿಬ್ಬಂದಿ ನಿಗಾವಹಿಸಲಿದ್ದಾರೆಂದು ತಿಳಿಸಲಾಗಿದೆ.

ಸೋಂಕು ಹೆಚ್ಚಿರುವ ರಾಜ್ಯಗಳಿಂದ ಬಂದ ಗರ್ಭಿಣಿಯರು, 80 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರು, ವೈದ್ಯಕೀಯ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿಗೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ.

Comments are closed.