ಕರ್ನಾಟಕ

ಬೆಳಗಾವಿಗೆ ಮುಂಬೈ ಧಾರಾವಿಯಿಂದ ಕದ್ದು ಮುಚ್ಚಿ ಬಂದ ಗರ್ಭಿಣಿಗೆ ಸೋಂಕು

Pinterest LinkedIn Tumblr


ಬೆಳಗಾವಿ: ಜಿಲ್ಲೆಯಲ್ಲಿ ನಿಜಾಮುದ್ದಿನ್ ತಬ್ಲೀಘಿ ಹಾಗೂ ಅಜ್ಮೀರ ಕಂಟಕದಿಂದ ತುಸು ದೂರುವಾಗುತ್ತಿರುವ ಬೆನ್ನಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದ ಮುಂಬೈನ ಧಾರಾವಿಯಿಂದ ನಂಜು ತಗುಲಿಸಿಕೊಂಡು ಕದ್ದು ಮುಚ್ಚಿ ಅಕ್ರಮವಾಗಿ ಜಿಲ್ಲೆಗೆ ಬಂದಿದ್ದ ಗರ್ಭಿಣಿಯ ಪತಿ, ಸಹೋದರ ಹಾಗೂ ಕಾರು ಚಾಲಕನ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ.

ಮುಂಬೈನ ಧಾರಾವಿಯಿಂದ ಕಾರಿನಲ್ಲಿ ಎಂಟು ದಿನಗಳ ಹಿಂದೆ ಬಂದಿದ್ದ ಗರ್ಭಿಣಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಬೆಳಗಾವಿ ಜಿಲ್ಲೆ ಪ್ರವೇಶಿಸುವಾಗ ಪಾಸ್ ಹೊಂದಿರಲಿಲ್ಲ. ಕದ್ದು ಮುಚ್ಚಿಕೊಂಡು ಜಿಲ್ಲೆಗೆ ಬಂದ ಗರ್ಭಿಣಿಗೆ ಪಾಸಿಟಿವ್ ಇರುವುದು ದೃಢವಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿದ ಗರ್ಭಿಣಿಯ ಪತಿ, ಸಹೋದರ ಹಾಗೂ ಮುಂಬೈನ ಕಾರು ಚಾಲಕನ ವಿರುದ್ಧ ದುರು ದಾಖಲಾಗಿದೆ.

ಮುಂಬೈನಿಂದ ಬಾಡಿಗೆ ಕಾರಿನಲ್ಲಿ ಪಾಸ್ ಇಲ್ಲದೇ ಗರ್ಭಿಣಿ ಹಾಗೂ ಈಕೆಯ ಪತಿ ಬಂದಿದ್ದರು. ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಪಾಸ್ ಇಲ್ಲದ್ದಕ್ಕೆ ಇವರನ್ನು ಒಳಗೆ ಬಿಟ್ಟಿರಲಿಲ್ಲ. ಆಗ ಗಡಿವರೆಗೆ ಕಾರು ಚಾಲಕ ಬಿಟ್ಟು ವಾಪಸ್ಸು ಮುಬೈಗೆ ಹೋಗಿದ್ದನು. ನಂತರ ಗರ್ಭಿಣಿಯ ಸಹೋದರ ಕಾರು ತೆಗೆದುಕೊಂಡು ಚೆಕ್‌ ಪೋಸ್ಟ್ ಬಳಿಗೆ ಬಂದು ದಂಪತಿಯನ್ನು ಕರೆದುಕೊಂಡು ನಗರಕ್ಕೆ ಬಂದಿದ್ದನು. ಈ ವಿಷಯ ಯಾರಿಗೂ ಗೊತ್ತಿಲ್ಲದೇ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಲಾಕ್‌ ಡೌನ್ ಮಾರ್ಗಸೂಚಿ ಪ್ರಕಾರ ಸೇವಾಸಿಂಧು ಮೂಲಕ ಇ-ಪಾಸ್ ಪಡೆಯದೇ ನಿಯಮ ಉಲ್ಲಂಘಿಸಿ ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆ ಪ್ರವೇಶಿಸಿದ ಮೂವರ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೋಂಕಿತ ಮಹಿಳೆಯ ಪತಿ, ಸಹೋದರ ಮತ್ತು ಮುಂಬೈನ ಕಾರು ಚಾಲಕನ ವಿರುದ್ಧ ಐಪಿಸಿ ಕಲಂ 269, 270, 188. 201, 202, r/w 34 ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯ ಸೆಕ್ಷನ್ ೩ರ ಪ್ರಕಾರ ದೂರು ದಾಖಲಿಸಲಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

Comments are closed.