ಕರ್ನಾಟಕ

ಲಂಡನ್‌ನಿಂದ ಬಂದ ವಿದ್ಯಾರ್ಥಿನಿ ಮೇಘನಾ ಹಂಚಿಕೊಂಡ ಅನುಭವ

Pinterest LinkedIn Tumblr


ಭಾರತೀಯರನ್ನು ವಾಪಸ್‌ ಕರೆಸಿಕೊಳ್ಳಲು ಕೇಂದ್ರ ಸರಕಾರ ಮಾಡಿದ ವಿಶೇಷ ವ್ಯವಸ್ಥೆಯಡಿ ಏರ್‌ ಇಂಡಿಯಾ ವಿಮಾನದಲ್ಲಿ ಲಂಡನ್‌ನಿಂದ ಸೋಮವಾರ ನಸುಕಿನಲ್ಲಿ ನಗರಕ್ಕೆ ಮರಳಿದ ಲ್ಯಾಂಡ್‌ಸ್ಕೇಪ್‌ ಆರ್ಕಿಟೆಕ್ಚರ್‌ ವಿದ್ಯಾರ್ಥಿನಿ ಮೇಘನಾ ತಮ್ಮ ಅನುಭವ ಹಂಚಿಕೊಂಡರು.

ಕೆಲವು ಪ್ರಯಾಣಿಕರು ತಾವೇ ತಂದಿದ್ದ ಮಾಸ್ಕ್‌, ಗ್ಲೌಸ್‌ ಬಳಕೆ ಮಾಡಿಕೊಂಡರು. ವಿಮಾನದ 10-15 ಸಾಲಿನಲ್ಲಿ ಕುಳಿತಿದ್ದವರು ಯಾವುದೇ ಮಾಸ್ಕ್‌, ಗ್ಲೌಸ್‌ ಧರಿಸಿರಲಿಲ್ಲ ಎಂದು ಹೇಳಿದರು.

”ಲಂಡನ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವ ಮೊದಲು ನಾವು ಆರೋಗ್ಯವಾಗಿದ್ದು, ಭಾರತದಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಪ್ಪಿದ್ದೇವೆ ಎಂಬ ಷರತ್ತಿನೊಂದಿಗೆ ಫಾರಂನಲ್ಲಿ ವಿವರ ತುಂಬಿಸಿಕೊಂಡು ಸಹಿ ಮಾಡಿಸಿಕೊಳ್ಳಲಾಯಿತು. ಇದಕ್ಕೂ ಮುನ್ನ ಭಾರತಕ್ಕೆ ಮರಳುವ ಕುರಿತು ಹೈಕಮಿಷನರ್‌ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದೆ. ವಿಮಾನ ಹೊರಡುವ 8 ತಾಸು ಮೊದಲು ಟಿಕೆಟ್‌ ಸಿಕ್ಕಿತು” ಎಂದು ಮೇಘನಾ ಹೇಳಿದರು.

”ವಿಮಾನದಲ್ಲಿ ಯಾವುದೇ ರೀತಿಯ ಬಿಸಿ ಆಹಾರ ಮತ್ತು ಸೀಟ್‌ ಸವೀರ್ಸ್‌ ಇರಲಿಲ್ಲ. ಮೂರ್ನಾಲ್ಕು ಬಾರಿ ತಿನ್ನುವಷ್ಟು ಸಿದ್ಧ ಆಹಾರದ ಪೊಟ್ಟಣ ಸೀಟಿನ ಮೇಲೆ ಇರಿಸಲಾಗಿತ್ತು. ವಾಶ್‌ ರೂಮ್‌ ಬಳಕೆಗೆ ಯಾವುದೇ ನಿಯಂತ್ರಣ ಇರಲಿಲ್ಲ. ಆದರೆ, ಸಾಲಿನಲ್ಲಿ ನಿಲ್ಲುವಂತಿರಲಿಲ್ಲ” ಎಂದು ಮೇಘನಾ ಟ್ವಿಟರ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

”ದೀರ್ಘ ಪ್ರಯಾಣದ ಬಳಿಕ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದೆವು. ಈ ವೇಳೆ ಚಪ್ಪಾಳೆ ತಟ್ಟಿ ಖುಷಿಪಡಲಾಯಿತು. ಅಲ್ಲಿ ವಿಮಾನ ಸಿಬ್ಬಂದಿ ಬದಲಾದ ಬಳಿಕ ಬೆಂಗಳೂರಿನ ಕಡೆ ವಿಮಾನ ಪ್ರಯಾಣ ಮುಂದುವರಿಸಿತು. ಸೋಮವಾರ ಬೆಳಗ್ಗೆ 4.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆವು. ವಿಮಾನ ಲ್ಯಾಂಡ್‌ ಆದ ಒಂದು ತಾಸಿನ ಬಳಿಕ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಳಗೆ ಇಳಿಯುವಂತೆ ಸೂಚಿಸಲಾಯಿತು. ವಿಮಾನದಿಂದ ಇಳಿಯುತ್ತಿದ್ದಂತೆಯೇ ಆರೋಗ್ಯ ತಪಾಸಣೆ, ಕೈಗೆ ಕ್ವಾರಂಟೈನ್‌ ಸೀಲ್‌, ವಲಸೆ ತಪಾಸಣೆ, ಬ್ಯಾಗ್‌ ಕಲೆಕ್ಷನ್‌ ನಂತರ ನಮ್ಮ ಸಾಮರ್ಥ್ಯಕ್ಕೆ ಅನುಸಾರ ಹೋಟೆಲ್‌ ಬುಕ್ಕಿಂಗ್‌ ಮಾಡಿಕೊಳ್ಳಲು ಅವಕಾಶ ನೀಡಲಾಯಿತು. ಈ ಅವಧಿಯಲ್ಲಿ ವಿಮಾನ ನಿಲ್ದಾಣದಲ್ಲಿ ಚೇರ್‌ಗಳನ್ನು ಸ್ವಚ್ಛಗೊಳಿಸಿ ಸ್ಯಾಂಡ್‌ವಿಚ್‌, ನೀರಿನ ಬಾಟಲಿ ನೀಡಿದರು” ಎಂದು ಅವರು ತಿಳಿಸಿದ್ದಾರೆ.

”ಶೆಫೀಲ್ಡ್‌ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನಾ ಇನ್ನೇನು ಭಾರತಕ್ಕೆ ಬರಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಆರಂಭವಾಗಿತ್ತು.

ದೂರದಿಂದಲೇ ಪಾಲಕರ ಭೇಟಿ
ನನ್ನನ್ನು ಕಾಣಲು ಪಾಲಕರು ಹೋಟೆಲ್‌ ಬಳಿ ಬಂದಿದ್ದರು. ಆದರೆ, ದೂರದಿಂದಲೇ ನೋಡಿ ಪರಸ್ಪರ ಕೈ ಬೀಸಿದರು ಎಂದು ಮೇಘನಾ ತಿಳಿಸಿದರು.

ಮೋದಿ, ಬಿಎಸ್‌ವೈ ಸೇರಿ ಎಲ್ಲರಿಗೂ ಧನ್ಯವಾದ
ಕಳೆದ 50 ದಿನಗಳಿಂದ ಲಂಡನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ಈ ಅವಧಿಯಲ್ಲಿ ನಮಗೆ ಸ್ಥಳೀಯ ವಿದ್ಯಾರ್ಥಿ ಸಂಘಟನೆ ಐಎನ್‌ಎಸ್‌ಇನಿಂದ ನೆರವು ಸಿಕ್ಕಿತ್ತು. ಅದರ ಮೂಲಕ ಸ್ವೀಡನ್‌ ಕೌನ್ಸಿಲರ್‌ ಸುರೇಶ್‌ ಕಟ್ಟಾಪುರ್‌, ಸಂತೋಷ ಪಾಟೀಲ್‌ ನೆರವಾದರು. ನಮ್ಮ ಪ್ರಯಾಣಕ್ಕೆ ನೆರವಾದ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸೇರಿ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ವ್ಯಾಸಂಗಕ್ಕೆ ತೆರಳಿದ್ದ ರಾಜ್ಯದ ಮತ್ತೊಬ್ಬ ವಿದ್ಯಾರ್ಥಿ ರಾಮಕೃಷ್ಣ ಹೇಳಿದರು.

ಪಾಲಕರ ಆತಂಕ ನಿವಾರಿಸಿದ ಸಚಿವರಿಗೆ ಧನ್ಯವಾದ
ನನ್ನ ಮಗ ಬೆಂಗಳೂರಿಗೆ ಮರಳಿರುವುದಕ್ಕೆ ಖುಷಿ ಇದೆ. ಆತಂಕದಲ್ಲಿದ್ದ ಪಾಲಕರಿಗೆ ನೆರವಾಗುವಲ್ಲಿ ಸಹಕರಿಸಿದ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯ ಮತ್ತು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಧನ್ಯವಾದಗಳು ಎಂದು ಕಲ್ಯಾಣ್‌ ಮೋಹನ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

Comments are closed.