ಕರ್ನಾಟಕ

ಮುಸ್ಲಿಂ ಗರ್ಭಿಣಿ ಮಹಿಳೆಗೆ ರಕ್ತದಾನ ಮಾಡಿದ ಹಿಂದೂ ಯುವಕ

Pinterest LinkedIn Tumblr


ಬೆಳಗಾವಿ(ಮೇ.09): ಕೊರೋನಾ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ಗೆ ಘೋಷಿಸಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಇಡೀ ದೇಶವೇ ಈ ಮಾರಕ ಕೊರೋನಾ ಅಟ್ಟಹಾಸಕ್ಕೆ ತಲ್ಲಣಗೊಂಡಿದೆ. ರಕ್ತದಾನ ಮಾಡಲು ಆಸ್ಪತ್ರೆಯತ್ತ ಮುಖಮಾಡಲು ಹಲವರು ಹೆದರುತ್ತಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಕುಂದಾನಗರಿ ಬೆಳಗಾವಿಯಲ್ಲಿ ಭಾವೈಕ್ಯತೆ ಹಾಗೂ ಮಾನವೀಯತೆಯ ಸಮಾಗಮವಾಗಿದೆ.

ಹೌದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಆಫ್ರೀನ್ ಶಾಬುದ್ದೀನ್ ಮುಲ್ಲಾ ಎಂಬ ತುಂಬು ಗರ್ಭಿಣಿಗೆ ರಕ್ತದ ಪ್ಲೇಟ್‌ಲೆಟ್ಸ್ ಬೇಕಾಗಿತ್ತು‌. ಆಸ್ಪತ್ರೆಯವರು ಯಾರದ್ದಾದರೂ ಬ್ಲಡ್ ಪ್ಲೇಟ್‌ಲೆಟ್ಸ್ ನೀಡಿ ಅದನ್ನ ಎಕ್ಸ್‌ಚೇಂಜ್ ಮಾಡಲಾಗುವುದು ಅಂತಾ ತಿಳಿಸಿದ್ದರಂತೆ. ಆದರೆ ಕೊರೋನಾ ಮಹಾಮಾರಿಗೆ ಹೆದರಿ ಯಾರೊಬ್ಬರೂ ಮುಂದೆ ಬಂದಿರಲಿಲ್ಲ.

ಇನ್ನು, ಆಫ್ರೀನ್‌ಗೆ ಗಂಡ ಶಾಬುದ್ದೀನ್ ರಕ್ತ ನೀಡಬೇಕೆಂದರೆ ಆತ ಪವಿತ್ರ ರಂಜಾನ್ ತಿಂಗಳ ಉಪವಾಸದಲ್ಲಿದ್ದ. ಹೀಗಾಗಿ ಸಹಾಯಕ್ಕಾಗಿ ಸ್ನೇಹಿತರ ಬಳಿ ವಿಚಾರಿಸಿದಾಗ ಸ್ನೇಹಿತರ ಮೂಲಕ ಬೆಳಗಾವಿ ಬ್ಲಡ್ ಗ್ರುಪ್ ವಾಟ್ಸಪ್ ಅಡ್ಮೀನ್ ಗಣೇಶ್ ಪಾಟೀಲ್‌ರನ್ನು ಸಂಪರ್ಕಿಸಿ ವಾಟ್ಸಪ್ ಗ್ರೂಪ್‌ನಲ್ಲಿ ರಿಕ್ವೆಸ್ಟ್ ಹಾಕಲಾಯಿತು.

ವಾಟ್ಸಪ್ ಗ್ರೂಪ್‌ನಲ್ಲಿ ಮೆಸೇಜ್ ನೋಡಿದ ಅರ್ಧ ಗಂಟೆಯಲ್ಲಿ ಬೆಳಗಾವಿ ಸದಾಶಿವ ನಗರ ನಿವಾಸಿ ಯುವಬ್ರಿಗೇಡ್ ಕಾರ್ಯಕರ್ತ ವಿಜಯ್ ರಾಥೋಡ್ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕೊರೋನಾ ಆತಂಕ ಹಿನ್ನೆಲೆ ಆಸ್ಪತ್ರೆ ಕಂಡರೇ ದೂರ ಓಡುವ ಇಂತಹ ಸಮಯದಲ್ಲಿ ಮುಂದೆ ಬಂದು ರಕ್ತದಾನ ಮಾಡಿ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಫ್ರೀನ್‌ಗೆ ಕಳೆದ ರಾತ್ರಿ ಮುದ್ದಾದ ಗಂಡು ಮಗು ಜನಿಸಿದ್ದು ಸಾಕ್ಷಾತ್ ಅಲ್ಲಾಹ ರೂಪದಲ್ಲೇ ವಿಜಯ್ ರಾಥೋಡ್ ಆಗಮಿಸಿ ಎರಡು ಜೀವ ಉಳಿಸಿದ್ದಾರೆ ಅಂತಾ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಕೊರೋನಾ ಆತಂಕ ನಡುವೆ ಮುಸ್ಲಿಂ ಗರ್ಭವತಿಗೆ ಹಿಂದೂ ಯುವಕ ರಕ್ತದಾನ ಮಾಡಿದ್ದು ಇತರರಿಗೂ ಮಾದರಿ.

Comments are closed.