ಕರ್ನಾಟಕ

ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ವಿತರಣೆಯಾಗುವ ಪಡಿತರ ವಿವರ ಇಲ್ಲಿದೆ

Pinterest LinkedIn Tumblr


ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಏಪ್ರಿಲ್‌ ಮತ್ತು ಮೇ ತಿಂಗಳ ಪಡಿತರ ಬಿಡುಗಡೆಯಾಗಿದ್ದು, ಮೇ ತಿಂಗಳ ಮೊದಲ ವಾರಾಂತ್ಯದಿಂದ ವಿತರಿಸಲಾಗುವುದು. ಅಂತ್ಯೋದಯ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಮತ್ತು ಕಾರ್ಡಿಗೆ 1 ಕೆ.ಜಿ. ತೊಗರಿಬೇಳೆ ಉಚಿತವಾಗಿ ವಿತರಿಸಲಾಗುತ್ತಿದೆ.

ಬಿಪಿಎಲ್‌ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಮತ್ತು ಏಪ್ರಿಲ್‌ನಲ್ಲಿ ವಿತರಿಸಬೇಕಾಗಿದ್ದ ಗೋಧಿಯನ್ನು ಪ್ರತಿ ಕಾರ್ಡಿಗೆ 4 ಕೆಜಿಯಂತೆ ಉಚಿತವಾಗಿ ವಿತರಿಸಲಾಗುವುದು. ಆಹಾರಧಾನ್ಯ ಪಡೆಯಲು ನೋಂದಾಯಿಸದೆ ಇರುವ ಎಪಿಎಲ್‌ ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ ಮತ್ತು ಎರಡು ಹಾಗೂ ಹೆಚ್ಚಿನ ಸದಸ್ಯರಿರುವ ಕಾರ್ಡುಗಳಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15ರೂ. ದರದಲ್ಲಿ ವಿತರಿಸಲಾಗುತ್ತಿದೆ.

ಏಕಕಾಲದಲ್ಲಿ ವಿತರಣೆ
ಹೊಸದಾಗಿ ಅರ್ಜಿ ಸಲ್ಲಿಸಿರುವ ಬಿಪಿಎಲ್‌ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು. ಅಂತರ ರಾಜ್ಯ/ಅಂತರ ಜಿಲ್ಲೆ ಪಡಿತರ ಚೀಟಿದಾರರು ಪೋರ್ಟೆಬಿಲಿಟಿಯಲ್ಲಿ ಆಹಾರಧಾನ್ಯ ಪಡೆಯಲು ಅವಕಾಶವಿದ್ದು, ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿದೆ.

ಬಯೋಮೆಟ್ರಿಕ್‌/ಒಟಿಪಿ
ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಪಡಿತರ ಚೀಟಿದಾರರ ಆಧಾರ್‌ ದೃಢೀಕೃತ ಬೆರಳಚ್ಚು (ಆಧಾರ್‌ ಬಯೋಮೆಟ್ರಿಕ್‌)/ಆಧಾರ್‌ ಓಟಿಪಿ/ಮೊಬೈಲ್‌ ಓಟಿಪಿ ದೃಢೀಕರಣದ ಮೂಲಕವೇ ಪಡಿತರ ವಿತರಿಸಲಾಗುವುದು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರು ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್‌ ಗಳನ್ನು ಹಾಕಿಕೊಂಡು ಪಡಿತರ ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

Comments are closed.