ಕರ್ನಾಟಕ

ಲಾಕ್‌ಡೌನ್‌ ಪರಿಣಾಮ ತುಕ್ಕು ಹಿಡಿಯುತ್ತಿರುವ ಸರಕಾರಿ ವಾಹನಗಳು

Pinterest LinkedIn Tumblr


ಕೊರೊನಾ ಲಾಕ್‌ಡೌನ್‌ನಿಂದ ಸರಕಾರಿ ಹಾಗೂ ಖಾಸಗಿ ಕಚೇರಿಗಳು ಕಳೆದೊಂದು ತಿಂಗಳಿಂದ ಬಾಗಿಲು ಮುಚ್ಚಿವೆ. ಇಲ್ಲಿನ ಅಧಿಕಾರಿಗಳು ಬಳಸುತ್ತಿದ್ದ ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ. ಇದರಿಂದಾಗಿ ಲಾಕ್‌ಡೌನ್‌ ತೆರವಿನ ಈ ವಾಹನಗಳನ್ನು ಸ್ಟಾರ್ಟ್‌ ಮಾಡುವುದು ಕಷ್ಟವೇ ಸರಿ.

ಅರ್ಧದಷ್ಟು ಸ್ಥಗಿತ

ಕಳೆದೆರಡು ದಿನಗಳಿಂದ ಲಾಕ್‌ಡೌನ್‌ ಸ್ವಲ್ಪ ಸಡಿಲಿಸಲಾಗಿದ್ದು, ಶೇ.50ರಷ್ಟು ಸರಕಾರಿ ಕಚೇರಿಗಳು ಮಾತ್ರ ಕಾರ‍್ಯ ನಿರ್ವಹಿಸುತ್ತಿವೆ. ಇದಕ್ಕೂ ಮುನ್ನ ಬರೋಬ್ಬರಿ 1 ತಿಂಗಳ ಕಾಲ ಬಹುತೇಕ ಸರಕಾರಿ ಕಚೇರಿಗಳು ಬಾಗಿಲು ಮುಚ್ಚಿದ್ದವು. ಜಿಲ್ಲಾಧಿಕಾರಿ, ಜಿಪಂ ಸಿಇ, ಎಸ್ಪಿ ಸೇರಿದಂತೆ ಒಂದಷ್ಟು ಕಚೇರಿಗಳು ಮಾತ್ರ ಕೆಲಸ ಮಾಡುತ್ತಿದ್ದವು. ಉಳಿದೆಲ್ಲ ಅಧಿಕಾರಿಗಳ ಕಾರುಗಳು ನಿಂತಲ್ಲೇ ನಿಂತಿದ್ದವು. ಇವುಗಳಲ್ಲಿ ಬಹುತೇಕ ಕಾರುಗಳನ್ನು ಚಾಲಕರೇ ನಿರ್ವಹಣೆ ಮಾಡುತ್ತಿದ್ದರು. ಅಧಿಕಾರಿಗಳ ಮನೆ ಮುಂದೆ ಕಾರು ನಿಲ್ಲಿಸಿ ಚಾಲಕರು ತಮ್ಮ ಮನೆ ಸೇರಿಕೊಂಡಿದ್ದರಿಂದ ಎಲ್ಲ ವಾಹನಗಳೂ ನಿಂತಲ್ಲೇ ನಿಂತು ತುಕ್ಕು ಹಿಡಿದು ಹೋಗಿವೆ. ಬಹುತೇಕ ವಾಹನಗಳು ಚಾಲನೆಗೊಳ್ಳುತ್ತಿಲ್ಲ ಎಂದು ದೂರು ವ್ಯಾಪಕವಾಗಿದೆ.

ಗುಜರಿ ಗಾಡಿಗಳು

ರಾಜ್ಯದಲ್ಲಿ ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವ ಬಹುತೇಕ ವಾಹನಗಳು ಹಳೆ ಮಾಡೆಲ್‌ ಕಾರುಗಳು. ಡಿಸಿ, ಎಸ್ಪಿ, ಜಿಪಂ ಸಿಇಒ ಬಿಟ್ಟರೆ, ಉಳಿದವರೆಲ್ಲರಿಗೂ ಓಬೀರಾಯನ ಕಾಲದ ಟಾಟಾ ಸುಮೊ, ಇಂಡಿಕಾ, ಸ್ಕಾರ್ಪಿಯೊ ಮೊದಲಾದ ವಾಹನಗಳನ್ನು ನೀಡಲಾಗಿದೆ. ಇವುಗಳು ಡಿಸೇಲ್‌ ಎಂಜಿನ್‌ ಗಾಡಿಗಳಾಗಿದ್ದು, ಕಾಲಕಾಲಕ್ಕೆ ನಿರ್ವಹಣೆ ಮಾಡಿದರೆ ಮಾತ್ರ ಓಡುತ್ತಿದ್ದವು. ಈಗ ತಿಂಗಳಿಂದ ನಿಂತು ಚಾಲನೆಗೊಳ್ಳುತ್ತಿಲ್ಲ.

ರಿಪೇರಿಗೆ ಹಣವಿಲ್ಲ

ಕೊರೊನಾ ಹೊಡೆತದಿಂದ ಆದಾಯವಿಲ್ಲದೇ ಸರಕಾರಿ ಖಜಾನೆಗಳು ಈಗಾಗಲೇ ಖಾಲಿಯಾಗಿವೆ. ಇದರಿಂದಾಗಿ ಕೆಟ್ಟು ನಿಂತಿರುವ ವಾಹನಗಳನ್ನು ಸರ್ವೀಸ್‌ಗೆ ಬಿಡುವುದು ಕಷ್ಟವೇ. ಹೊಸ ಕಾರುಗಳನ್ನು ಪಡೆದುಕೊಳ್ಳುವುದಂತೂ ಕನಸಿನ ಮಾತೇ ಸರಿ. ಹೀಗಾಗಿ ಅಧಿಕಾರಿಗಳ ಓಡಾಟಕ್ಕೆ ಏನು ಮಾಡುವುದಪ್ಪಾ ಎಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಎಲ್ಲ ಹಾಳಾಗಿದೆ

ಕಾರು, ಜೀಪುಗಳು ನಿಂತಲ್ಲೇ ನಿಂತಿದ್ದರಿಂದ ಅವುಗಳ ಒಳಗೆ ಇಲಿ, ಹೆಗ್ಗಣಗಳು ಗೂಡು ಮಾಡಿಕೊಂಡು ವೈರ್‌ಗಳನ್ನು ತುಂಡರಿಸಿ ಹಾಕಿರುವ ಸಾಧ್ಯತೆ ಇದೆ. ಏರ್‌ಫಿಲ್ಟರ್‌, ರಬ್ಬರ್‌ ಸಾಧನಗಳನ್ನೆಲ್ಲಾ ಕಚ್ಚಿ ಹಾಕಿವೆ, ಇದರಿಂದ ವಾಹನಗಳ ಸ್ಥಿತಿ ಅಧೋಗತಿಯಾಗಿದೆ.

ರಿಪೇರಿ ಕಷ್ಟ

ಲಾಕ್‌ಡೌನ್‌ ಸಂಪೂರ್ಣ ಸಡಿಲುಗೊಳ್ಳದ ಕಾರಣ, ಗಾರೇಜ್‌ಗಳು ತೆರೆದಿಲ್ಲ. ಒಂದೊಮ್ಮೆ ತೆರೆದಿದ್ದರೂ, ಬಿಡಿ ಭಾಗಗಳು ಸಿಗುವುದು ಕಷ್ಟ. ಮೆಕಾನಿಕ್‌ ಸಿಕ್ಕಿದರೆ, ಬಿಡಿಭಾಗ ಸಿಗುವುದಿಲ್ಲ, ಬಿಡಿಭಾಗ ಸಿಕ್ಕರೆ ಮೆಕಾನಿಕ್‌ ಸಿಗೋಲ್ಲ ಎಂಬಂತಾಗಿದೆ ಸದ್ಯದ ಸ್ಥಿತಿ. ಒಟ್ಟಿನಲ್ಲಿ ಲಾಕ್‌ಡೌನ್‌ ತೆರವಿನ ಬಳಿಕ ಸಾವಿರಾರು ವಾಹನಗಳು ಸರ್ವೀಸ್‌ ಸೆಂಟರ್‌ ಮುಂದೆ ಸಾಲುಗಟ್ಟಿ ನಿಲ್ಲುವುದು ಖಚಿತ. ಅದುವರೆಗೂ ಬಹುತೇಕ ಅಧಿಕಾರಿಗಳಿಗೆ ಪಾದಯಾತ್ರೆಯೇ ಗತಿಯೇನೋ?

Comments are closed.