ಕರ್ನಾಟಕ

ಬೆಳಗಾವಿಯಲ್ಲಿ ಕೋಬ್ರಾ ಕಮಾಂಡೋ ಮೇಲೆ ಪೊಲೀಸರ ಹಲ್ಲೆ ಪ್ರಕರಣ: ತನಿಖೆಗೆ ಒತ್ತಾಯ

Pinterest LinkedIn Tumblr


ಬೆಂಗಳೂರು(ಏ. 27): ನಾಲ್ಕು ದಿನಗಳ ಹಿಂದೆ ಬೆಳಗಾವಿಯ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್​ಪಿಎಫ್​ನ CoBRA ವಿಭಾಗದ ಕಮ್ಯಾಂಡೋ ಕ್ಯಾಪ್ಟನ್ ಸಚಿನ್ ಸಾವಂತ್ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ಎಸಗಿದ ಘಟನೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯನ್ನು ತನಿಖೆಗೊಳಪಡಿಸಬೇಕೆಂದು ಸಿಆರ್​ಪಿಎಫ್​ನ ಎಡಿಜಿಪಿ ಸಂಜಯ್ ಅರೋರಾ ಅವರು ಒತ್ತಾಯ ಮಾಡಿದ್ಧಾರೆ. ಈ ಸಂಬಂಧ, ಕರ್ನಾಟಕ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಅರೋರಾ ಪತ್ರ ಬರೆದು ಮನವಿ ಮಾಡಿಕೊಂಡಿದ್ಧಾರೆ.

ಸಿಆರ್​ಪಿಎಫ್​ನ CoBRA (ಕಮ್ಯಾಂಡೋ ಬೆಟಾಲಿಯನ್ ಫಾರ್ ರಿಸೊಲ್ಯೂಟ್ ಆ್ಯಕ್ಷನ್) ವಿಭಾಗದ ಕಮ್ಯಾಂಡೋ ಆಗಿರುವ ಕ್ಯಾಪ್ಟನ್ ಸಚಿನ್ ಸಾವಂತ್ ಮೇಲೆ ಹಲ್ಲೆಯ ಘಟನೆ ಆಗಿದ್ದು ಏಪ್ರಿಲ್ 23ರಂದು. ರಜೆಯ ಮೇಲಿದ್ದ ಸಾವಂತ್ ಅವರು ಮನೆ ಎದುರು ತಮ್ಮ ಬೈಕ್ ಸ್ವಚ್ಛಗೊಳಿಸುತ್ತಿದ್ದರು. ಅಲ್ಲಿಗೆ ಬಂದ ಸದಲಗ ಠಾಣೆಯ ಬೀಟ್ ಪೊಲೀಸರು ಸಾವಂತ್ ಮಾಸ್ಕ್ ಧರಿಸಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಕ್ಯಾಪ್ಟನ್ ಸಚಿನ್ ಸಾವಂತ್ ಮೇಲೆ ಹಲ್ಲೆ ಎಸಗಿ ಬರಿಗಾಲಿನಲ್ಲೇ ಅವರನ್ನು ಪೆರೇಡ್ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಕೈಗೆ ಬೇಡಿ ಹಾಕಿ ಸರಪಳಿಯಲ್ಲಿ ಬಂಧಿಸಿದ್ದರು.

ಪೊಲೀಸರು ಸಿಆರ್​ಪಿಎಫ್ ಕಮ್ಯಾಂಡೋ ಮೇಲೆ ಹಲ್ಲೆ ಎಸಗುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಉಲ್ಲೇಖಿಸಿರುವ ಸಿಆರ್​ಪಿಎಫ್ ಎಡಿಜಿಪಿಯವರು, ಪೊಲೀಸರ ವರ್ತನೆ ನಾಗರಿಕ ವಿರೋಧಿಯಾಗಿದೆ ಎಂದು ಆಕ್ಷೇಪಿಸಿದ್ಧಾರೆ.

ಸಿಆರ್​ಪಿಎಫ್​ನಲ್ಲಿ ಶಿಸ್ತುಪಾಲನೆಗೆ ಬಹಳ ಮಹತ್ವ ಕೊಡಲಾಗುತ್ತದೆ. ಇಂಥ ಘಟನೆಗಳನ್ನ ನಿಭಾಯಿಸಲು ಮೀಸಲು ಪೊಲೀಸ್ ಪಡೆಯಲ್ಲಿ ಸಮರ್ಪಕ ವ್ಯವಸ್ಥೆ ಇದೆ. ಕೋಬ್ರಾ ಕಮ್ಯಾಂಡೋವನ್ನು ಬಂಧಿಸುವ ಮುನ್ನ ಸಿಆರ್​ಪಿಎಫ್​ನ ಹಿರಿಯ ಅಧಿಕಾರಿಗಳ ಗಮನಕ್ಕೆ ಇದನ್ನ ತರಬಹುದಿತ್ತು ಎಂದು ಸಿಆರ್​ಪಿಎಫ್​ನ ಎಡಿಜಿಪಿ ಸಂಜಯ್ ಅರೋರಾ ಈ ಪತ್ರದಲ್ಲಿ ತಿಳಿಸಿದ್ದಾರೆ.

Comments are closed.