ಕರ್ನಾಟಕ

ರಾಜ್ಯದಲ್ಲಿ ಅಧಿಕಗೊಳ್ಳುತ್ತಿರುವ ಕೊರೋನಾ; ಸೋಂಕಿತರಿಗೆ ವೆಂಟಿಲೇಟರ್ ಸೌಲಭ್ಯದ ಕೊರತೆ!

Pinterest LinkedIn Tumblr


ಬೆಂಗಳೂರು (ಏ. 5): ರಾಜ್ಯದಲ್ಲಿ ಇದುವರೆಗೂ 144 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ 4 ಜನ ಸಾವನ್ನಪ್ಪಿದ್ದಾರೆ. ಆದರೂ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ನೀಡಲು ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲ. ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್​‌ಗಳ ಸಂಖ್ಯೆಯನ್ನು ಕೇಳಿದರೆ ನೀವು ಶಾಕ್ ಆಗುವುದು ಖಚಿತ. ಇದೇ ರೀತಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾದರೆ ಇನ್ಮುಂದೆ ಸೋಂಕಿತರಿಗೆ ವೆಂಟಿಲೇಟರ್ ಸೌಲಭ್ಯ ಒದಗಿಸುವುದು ಕೂಡ ಕಷ್ಟ!

ದೇಶಾದ್ಯಂತ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳು, ಮಾಸ್ಕ್​ಗಳ ಕೊರತೆ ಎದುರಾಗಿದೆ. ಅದರಂತೆ ಕರ್ನಾಟಕದ ಆಸ್ಪತ್ರೆಗಳಲ್ಲಿ ಕೂಡ ವೆಂಟಿಲೇಟರ್​ಗಳ ಕೊರತೆ ಎದ್ದುಕಾಣುತ್ತಿದೆ. ಇಡೀ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್​ಗಳ ಸಂಖ್ಯೆ ಕೇವಲ 178! ಹೌದು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 150ಕ್ಕೆ ತಲುಪುತ್ತಿದೆ, ಇನ್ನೂ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೂ ವೆಂಟಿಲೇಟರ್​ಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಇದು ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಯನ್ನು ತೆರೆದಿಡುತ್ತಿದೆ.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಲ್ಲಿ ವೆಂಟಿಲೇಟರ್​ಗಳ ಸಂಖ್ಯೆ ಬಹಿರಂಗವಾಗಿದೆ. ರಾಜ್ಯದ 7 ಕೋಟಿ ಜನಸಂಖ್ಯೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್​ಗಳು ಕೇವಲ 178. ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೋವಿಡ್ 19 ಚಿಕಿತ್ಸೆಗಾಗಿ 9 ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುತಿಸಿದೆ. ಆ 9 ಸರ್ಕಾರಿ ಆಸ್ಪತ್ರೆಗಳಲ್ಲಿರುವುದು ಕೇವಲ 178 ವೆಂಟಿಲೇಟರ್​ಗಳು. ಸರ್ಕಾರಿ ಆಸ್ಪತ್ರೆಗಳ‌ ಐಸಿಯು ಬೆಡ್​ಗಳ ಸಂಖ್ಯೆ ಕೇವಲ 244 ಮಾತ್ರ.

ಯಾವ ಆಸ್ಪತ್ರೆಯಲ್ಲಿ ಎಷ್ಟು ವೆಂಟಿಲೇಟರ್​ಗಳು?:

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್​ಗಳು
ಬೌರಿಂಗ್ ಮತ್ತು ಲೇಡಿ ಕರ್ಜನ್ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ 4 ವೆಂಟಿಲೇಟರ್​ಗಳು
ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 5 ವೆಂಟಿಲೇಟರ್​
ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 18 ವೆಂಟಿಲೇಟರ್
ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ 28 ವೆಂಟಿಲೇಟರ್
ಕಲ್ಬುರ್ಗಿ ಇಎಸ್ಐ ಆಸ್ಪತ್ರೆಯಲ್ಲಿ 16 ವೆಂಟಿಲೇಟರ್
ಗದಗ ಜಿಲ್ಲಾಸ್ಪತ್ರೆಯಲ್ಲಿ 12 ವೆಂಟಿಲೇಟರ್
ಬಳ್ಳಾರಿ‌ ಜಿಲ್ಲಾಸ್ಪತ್ರೆಯಲ್ಲಿ 15 ವೆಂಟಿಲೇಟರ್
ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್​ಗಳಿವೆ.

Comments are closed.