
ಬೆಳಗಾವಿ (ಏಪ್ರಿಲ್ 05); ಮಾರಣಾಂತಿಕ ಕೊರೋನಾ ದಾಳಿಗೆ ಇಡೀ ದೇಶ ಬೆಚ್ಚಿ ಬಿದ್ದಿದೆ. ಸೋಂಕು ಪೀಡಿತ ವ್ಯಕ್ತಿಗಳನ್ನು ಎಲ್ಲೆಡೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೊರೋನಾ ಸೋಂಕಿತ ವ್ಯಕ್ತಿಗಳನ್ನು ಜನರಲ್ ವಾರ್ಡ್‌ನಲ್ಲೇ ಇರಿಸಲಾಗಿದೆ, ಯಾವುದೇ ಚಿಕಿತ್ಸೆ ನೀಡಲಾಗುತ್ತಿಲ್ಲ. ಪರಿಣಾಮ ಸೋಂಕಿತ ಮೂವರು ವ್ಯಕ್ತಿಗಳು ಡಾನ್ಸ್ ಮಾಡುತ್ತಾ ಆಸ್ಪತ್ರೆಯಾದ್ಯಂತ ಸುತ್ತಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಮೂವರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂವರನ್ನೂ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ. ಕೊರೋನಾ ಸೋಂಕಿತರನ್ನೂ ಸಹ ಇತರೆ ರೋಗಿಗಳ ಜತಗೆ ಒಂದೇ ಕೊಠಡಿಯಲ್ಲಿ ಇಡಲಾಗಿದೆ. “ನಮಗೆ ಏಕೆ ಚಿಕಿತ್ಸೆ ನೀಡಲಾಗುತ್ತಿಲ್ಲ” ಎಂದು ಸೋಂಕಿತರು ಪ್ರಶ್ನೆ ಮಾಡಿದರೂ ಸಹ ಅದನ್ನು ಆಸ್ಪತ್ರೆಯಲ್ಲಿ ಯಾರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ಹೀಗಾಗಿ ಸೋಂಕಿತರು ನಾವು ಕೋರೊನಾದವರು ನಮ್ಮನ್ನು ಹೊರಗೆ ಬಿಡಿ ಎಂದು ಡ್ಯಾನ್ಸ್ ಮಾಡಿ ಸಿಬ್ಬಂದಿಗಳ ಎದುರು ಒತ್ತಾಯ ಮಾಡಿದ್ದಾರೆ. ಅಲ್ಲದೆ, ಬಿಮ್ಸ್‌ನಲ್ಲಿ ಪರಿಸ್ಥಿತಿ ಹೇಗಿದೆ? ಎಂಬ ಕುರಿತು ವಿಡಿಯೋ ಸಹ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೊರೋನಾ ಪೀಡಿತರಿಗೆ ಚಿಕಿತ್ಸೆ ಏಕಿಲ್ಲ? ಇಷ್ಟೊಂದು ಬೇಜವಾಬ್ದಾರಿ ಏಕೆ? ಎಂಬ ಕುರಿತು ಜಿಲ್ಲಾಡಳಿತ ಉತ್ತರಿಸಬೇಕಿದೆ.
Comments are closed.