ಕರ್ನಾಟಕ

ವಾಟ್ಸಪ್‌ ನಲ್ಲಿ ಪಿಯು ಪ್ರಶ್ನೆಪತ್ರಿಕೆ ವೈರಲ್‌!

Pinterest LinkedIn Tumblr


ಇಂಡಿ/ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಪ್ರಶ್ನೆಪತ್ರಿಕೆ ಸೋರಿಕೆ ಗುಮಾನಿ ಹರಿದಾಡಿ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ. ಆದರೆ ಇದು ಸೋರಿಕೆಯಲ್ಲ, ಪರೀಕ್ಷಾ ಅಕ್ರಮವಾಗಿದ್ದು ಇದಕ್ಕೆ ಕಾರಣನಾದ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿಜಯಪುರ ತಾಲೂಕಿನ ಇಂಡಿಯ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಅರ್ಧಗಂಟೆಯಲ್ಲೇ ಸೋರಿಕೆಯಾಗಿದೆ. ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳ ಕೈಗೆ ಸಿಕ್ಕಿದ ಕೂಡಲೇ ಕಿಟಿಕಿ ಸಮೀಪದಲ್ಲಿರುವ ಪರೀûಾರ್ಥಿಯೊಬ್ಬನಿಂದ ಪ್ರಶ್ನೆಪತ್ರಿಕೆಯನ್ನು ಪಡೆದು ಮೊಬೈಲ್‌ ಮೂಲಕ ಫೋಟೋ ತೆಗೆದು ವಾಟ್ಸಪ್‌ನಲ್ಲಿ ಹರಿಯ ಬಿಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸೋರಿಕೆಯಾಗಿಲ್ಲ
ಬುಧವಾರ ನಡೆದ ಭೌತಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ. ಇದು ಪರೀಕ್ಷೆ ಆರಂಭಗೊಂಡ ಒಂದು ಗಂಟೆಯೊಳಗೆ ವಾಟ್ಸಪ್‌ಗಳಲ್ಲಿ ಹರಿದಾಡಿದೆ. ಇದನ್ನು ಪರೀಕ್ಷಾ ಅಕ್ರಮವೆಂದು ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲು ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಎಸ್‌ಪಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಜತೆಗೆ ಸೋರಿಕೆಗೆ ಕಾರಣನಾದ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದ್ದು, ಕೊಠಡಿ ಮೇಲ್ವಿಚಾರಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲದೆ, ಫೋಟೋ ಕ್ಲಿಕ್ಕಿಸಿ, ವಾಟ್ಸಪ್‌ನಲ್ಲಿ ಹರಿಯಬಿಟ್ಟ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Comments are closed.