ಕರ್ನಾಟಕ

ಗೆಳೆಯನ ಕಿಡ್ನಾಪ್ ಮಾಡಿ 12 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಬಂಧನ

Pinterest LinkedIn Tumblr


ಬೆಂಗಳೂರು: ಸಾಲ ತೀರಿಸಲು ಸ್ನೇಹಿತನನ್ನೇ ಅಪಹರಿಸಿ 12 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪಿಯನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಸೈಯದ್‌ ರಾಹಿಲ್‌(27) ಬಂಧಿತ. ಆತನಿಂದ ಒಂದು ಕಾರು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯ ಸಹಚರರಾದ ಸುಲ್ತಾನ್‌ ಮತ್ತು ಆತನ ಸ್ನೇಹಿತರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಆರೋಪಿಗಳು ಫೆ.9ರಂದು ಮಲ್ಲೇಶ್ವರ ನಿವಾಸಿ ಸುದೀಪ್‌ (27) ಎಂಬವರನ್ನು ಕೆ.ಆರ್‌.ಪುರದಿಂದ ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.

ಅಪಹರಣಕ್ಕೊಳಗಾದ ಸುದೀಪ್‌ ಇಂಟೀರಿಯರ್‌ ಡೆಕೋರೆಟರ್ಸ್‌ ಆಗಿದ್ದು, ಆರೋಪಿ ಸೈಯದ್‌ ರಾಹಿಲ್‌ ಗೋರಿಪಾಳ್ಯದಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದಾನೆ. ಇಬ್ಬರು ಐದು ವರ್ಷಗಳಿಂದ ಸ್ನೇಹಿತರಾಗಿದ್ದು, ರಾಹಿಲ್‌ ಹಲವು ಬಾರಿ ಸುದೀಪ್‌ ಬಳಿ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ.

ಈ ಸಂದರ್ಭದಲ್ಲಿ ಸುದೀಪ್‌, ತನ್ನ ಆಸ್ತಿ-ಪಾಸ್ತಿಯ ಬಗ್ಗೆ ಹೇಳಿಕೊಂಡಿದ್ದು, ಜಮೀನುಗಳಿದ್ದು, ಕೋಟ್ಯಂತರ ರೂ. ಬೆಲೆ ಬಾಳುತ್ತವೆ ಎಂದು ಹೇಳಿಕೊಂಡಿದ್ದ. ಈ ಮಧ್ಯೆ ರಾಹಿಲ್‌ ಹತ್ತಾರು ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟಕ್ಕೆ ಬೇಸತ್ತ ಆರೋಪಿ, ಸಹಚರ ಸುಲ್ತಾನ್‌ಗೆ ಸ್ನೇಹಿತ ಸುದೀಪ್‌ ಬಗ್ಗೆ ತಿಳಿಸಿದ್ದಾನೆ. ಬಳಿಕ ಇತರರ ಜತೆ ಸೇರಿಕೊಂಡು ಸುದೀಪ್‌ ಅಪಹರಣಕ್ಕೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಫೆ.8ರಂದು ರಾತ್ರಿ ಸುದೀಪ್‌ಗೆ ಕರೆ ಮಾಡಿದ ರಾಹಿಲ್‌ ಆತ ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾನೆ. ಕೆ.ಆರ್‌.ಪುರದಲ್ಲಿರುವ ಸಹೋದರಿ ಮನೆಗೆ ಹೋಗಿ ಸಮೀಪದಲ್ಲಿರುವ ಬಾರ್‌ವೊಂದರಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಆತನನ್ನು ಕಾರಿನಲ್ಲಿ ಅಪಹರಿಸಿ ಗೋರಿಪಾಳ್ಯದ ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಫೆ.9ರಂದು ಬೆಳಗ್ಗೆ 9.20ಕ್ಕೆ ಸುದೀಪ್‌ ಮೂಲಕ ಸಹೋದರಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಮಾಹಿತಿ ನೀಡಿದ್ದಾರೆ.

ನಂತರ 11 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಮತ್ತೂಮ್ಮೆ ಕರೆ ಮಾಡಿ 12 ಲಕ್ಷ ರೂ. ನೀಡಿದರೆ “ನಿಮ್ಮ ತಮ್ಮನನ್ನು ಬಿಡುತ್ತೇವೆ’ ಎಂದು ಬೆದರಿಕೆಯೊಡ್ಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಮಲ್ಲೇಶ್ವರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಎಲ್‌.ಟಿ.ಚಂದ್ರಕಾಂತ್‌ ನೇತೃತ್ವದ ತಂಡ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ ಆಧರಿಸಿ ಆರೋಪಿಯನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು.

Comments are closed.