ಕರ್ನಾಟಕ

ಚೀನಾದಿಂದ ಬಂದ ಹುಬ್ಬಳ್ಳಿ ಟೆಕ್ಕಿಗೆ ಕೊರೊನಾ ವೈರಸ್‌ ತಗುಲಿರುವ ಶಂಕೆ..!

Pinterest LinkedIn Tumblr


ಹುಬ್ಬಳ್ಳಿ: ಈಗಾಗಲೇ ಕೊರೊನಾ ವೈರಸ್‌ ಭೀತಿಯಲ್ಲಿರುವ ಚೀನಾದಿಂದ ವಾಪಸ್‌ ಬಂದಿರುವ ಹುಬ್ಬಳ್ಳಿ ಮೂಲದ ಟೆಕ್ಕಿಗೆ ಮಾರಕ ಕೊರೊನಾ ವೈರಸ್‌ ತಗುಲಿರುವ ಶಂಕೆ ಮೂಡಿದ್ದು, ವಾಣಿಜ್ಯ ನಗರಿಯಷ್ಟೇಯಲ್ಲ ರಾಜ್ಯವನ್ನೇ ತಲ್ಲಣಗೊಳಿಸಿದೆ.

ಹುಬ್ಬಳ್ಳಿಯ ಕೇಶ್ವಾಪುರ ಮೂಲದ ಸಂದೀಪ ಸಿದ್ದಪ್ಪ ಕೆಳಸಂಗದೆ (39) ಅವರಲ್ಲಿ ಕೊರೊನಾ ವೈರಸ್‌ನ ಕೆಲ ಲಕ್ಷಣಗಳು ಕಂಡುಬಂದಿವೆ. ಸದ್ಯ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ವಿಶೇಷ ನಿಗಾ ಘಟಕ (ಐಸೋಲೇಶನ್‌ ವಾರ್ಡ್‌) ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ ಸಂದೀಪ್ ಅವರ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಲ್ಯಾಬ್‌ಗೆ ರವಾನಿಸಲಾಗಿದ್ದು, ಮಂಗಳವಾರ ನಿಖರ ಮಾಹಿತಿ ತಿಳಿಯಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯ ಸಂದೀಪ ಅವರಿಗೆ ಒಂದು ವೇಳೆ ಕೊರೊನಾ ವೈರಸ್‌ ಇರುವುದು ದೃಢಪಟ್ಟರೆ, ಇದು ಭಾರತದ ಮೂರನೇ ಹಾಗೂ ಕರ್ನಾಟಕದ ಮೊದಲ ಪ್ರಕರಣ ಎಂದು ದಾಖಲಾಗುತ್ತದೆ. ಆದರೆ, ಕಿಮ್ಸ್‌ ವೈದ್ಯಾಧಿಕಾರಿಗಳು ಕೊರೊನಾ ವೈರಸ್‌ ತಗುಲಿರುವುದನ್ನು ಬಹುತೇಕ ಅಲ್ಲಗಳೆಯುತ್ತಿರುವುದು ಸದ್ಯ ಸಮಾಧಾನಕ್ಕೆ ಕಾರಣವಾಗಿದೆ.

ಚೀನಾದ ವುಹಾನ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ, ಜನವರಿ 18ರಂದು ಮುಂಬೈಗೆ ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ಶನಿವಾರದವರೆಗೆ ಅಲ್ಲಿಯೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಜನವರಿ 21ರಿಂದ ಆರೋಗ್ಯದಲ್ಲಿ ತೀವ್ರ ಏರುಪೇರು ಮತ್ತು ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮೂಲ ಊರು ಹುಬ್ಬಳ್ಳಿಗೆ ಭಾನುವಾರ ಬಂದಿದ್ದಾರೆ.
ತೀವ್ರ ಜ್ವರದ ಕಾರಣ ಕಿಮ್ಸ್‌ಗೆ ದಾಖಲಾಗುವ ಪೂರ್ವ ಚಿಕಿತ್ಸೆ ಪಡೆಯಲು ಕೆಲ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ, ಸಂದೀಪ ಅವರು ಚೀನಾದಿಂದ ವಾಪಸ್‌ ಆಗಿರುವ ಕಾರಣದಿಂದ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದವು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಿಮ್ಸ್‌ಗೆ ಬಂದ ಸಂದೀಪ್, ಸಂಜೆ 6ಕ್ಕೆ ದಾಖಲಾಗಿದ್ದಾರೆ. ಹಾಗಾಗಿ ಶಂಕಿತ ಕೊರೊನಾ ವೈರಸ್‌ ಇರಬಹುದು ಎಂಬ ಕಾರಣಕ್ಕಾಗಿ ಕಿಮ್ಸ್‌ನ ಮೊದಲನೇ ಮಹಡಿಯಲ್ಲಿ ನಾಲ್ಕು ಹಾಸಿಗೆಯ ಐಸೋಲೇಶನ್‌ ವಾರ್ಡ್‌ ತೆರೆಯಲಾಗಿದೆ.

ವಾರ್ಡ್‌ನಲ್ಲಿಅಗತ್ಯ ಔಷಧಗಳನ್ನು ಇರಿಸಲಾಗಿದ್ದು, ವೆಂಟಿಲೇಟರ್‌ ವ್ಯವಸ್ಥೆ ಸಹ ಮಾಡಿಕೊಂಡು ಕೊರೊನಾ ಶಂಕಿತ ಸಂದೀಪಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮೆಡಿಸಿನ್‌ ವಿಭಾಗದ ಡಾ. ಆನಂದ ಕೊಪ್ಪದ ಅವರ ನೇತೃತ್ವದ ತಂಡ ಇವರ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸಂದೀಪ ಅವರು ತೀವ್ರ ತಲೆನೋವು, ಕೆಮ್ಮು, ಜ್ವರದಿಂದ ಬಳುತ್ತಿದ್ದಾರೆ. ವಿಶೇಷವಾಗಿ ಇವರು ಚೀನಾದಿಂದ ಹಿಂದಿರುಗಿರುವ ಕಾರಣದಿಂದ ಕೊರೊನಾ ವೈರಸ್‌ನ ಕೆಲ ಲಕ್ಷಣಗಳು ಇರಬಹುದು ಎಂದು ಶಂಕಿಸಲಾಗಿದೆ. ಒಂದು ವೇಳೆ ಕೊರೊನಾ ವೈರಸ್‌ ಇದ್ದಿದ್ದರೆ, ಚಿಕಿತ್ಸೆ ಪಡೆಯದೇ ಇಷ್ಟು ದಿನ ಬದುಕಿರಲು ಸಾಧ್ಯವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ರೋಗಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ರೋಗಿಯ ರಕ್ತ ಮತ್ತು ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಮಂಗಳವಾರ ವರದಿ ಬರುವ ಸಾಧ್ಯತೆ ಇದೆ ಎಂದು ಕಿಮ್ಸ್‌ ಅಧೀಕ್ಷಕ ಡಾ.ಸಿ.ಅರುಣಕುಮಾರ ತಿಳಿಸಿದ್ದಾರೆ.

Comments are closed.