ಕರ್ನಾಟಕ

ಬಿಜೆಪಿಗೆ ಬೇಡವಾದ ಅನಂತ್ ಕುಮಾರ್ ಹೆಗಡೆ ನಿಮ್ಹಾನ್ಸ್‌ಗೆ ಹೋಗಿ ಪರೀಕ್ಷಿಸಿಕೊಳ್ಳಲಿ: ಡಿ.ಕೆ.ಸುರೇಶ್

Pinterest LinkedIn Tumblr

ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಯಾರಿಗೂ ಬೇಡವಾದ ವಸ್ತು. ಬಿಜೆಪಿಗೂ ಬೇಡವಾದವರು ಎಂದು ಸಂಸದ ಡಿ.ಕೆ.ಸುರೇಶ್ ಹರಿಹಾಯ್ದಿದ್ದಾರೆ.

ಗಾಂಧೀಜಿ ಹಾಗೂ ಕಾಂಗ್ರೆಸ್ ಕುರಿತ ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುರೇಶ್, ಬಿಜೆಪಿಯವರು ಈಗಾಗಲೇ ಅನಂತ್‌ಕುಮಾರ್ ಹೆಗಡೆ ಅವರನ್ನು ಕೈಬಿಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ತಮ್ಮ ಅಸ್ತಿತ್ವ ಸಾಬೀತುಪಡಿಸುವ ಸಲುವಾಗಿ ಈ ರೀತಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಮ್ಮೆ ಅವರು ಬೆಂಗಳೂರಿನ ನಿಮ್ಹಾನ್ಸ್‌ಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರರಿಲ್ಲದೇ ಇದ್ದಿದ್ದರೆ ಇನ್ನೂ ಬ್ರಿಟೀಷರ ಆಳ್ವಿಕೆಯಲ್ಲಿಯೇ ಭಾರತ ಇರಬೇಕಿತ್ತು. ಸಂವಿಧಾನ ಇಲ್ಲದಿದ್ದರೆ ಅನಂತ್ ಕುಮಾರ್ ಹೆಗಡೆಗೆ ಈ ರೀತಿ ಮಾತನಾಡಲು ವಾಕ್ ಸ್ವಾತಂತ್ರ ಎಲ್ಲಿಂದ ಬರುತ್ತಿತ್ತು? ದೇಶದಲ್ಲಿ ಹಿಟ್ಲರ್ ಸಂಸ್ಕೃತಿ ಇದೆ ಎಂದು ಡಿ‌‌.ಕೆ.ಸುರೇಶ್ ಕುಟುಕಿದರು.

ಸ್ವಾತಂತ್ರ ಹೋರಾಟಗಾರರು, ಪ್ರಗತಿಪರರು ಎಲ್ಲಾ ಷಂಡರು ಎಂದಿದ್ದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಯಾಗಿ ಡಿಕೆ ಸುರೇಶ್ ಈ ಮಾತನ್ನಾಡಿದ್ದಾರೆ.

“ಹೆಗಡೆಯವರನ್ನು ಅವ್ರಿಗೆ ಅವರೇ ಗುರುತಿಸಿಕೊಳ್ಳುವ ಸ್ಥಿತಿ ಒದಗಿದೆ. ಈಗಲಾದರೂ ಬಿಜೆಪಿಗರು ಮತ್ತೆ ತನ್ನ ಕೈಹಿಡಿಯುವರು, ಮತ್ತೆ ಅಧಿಕಾರ ಕೊಡುವರೆನ್ನುವ ಆಸೆಯಿಂದ ಹೆಗಡೆ ಹೀಗೆಲ್ಲಾ ಮಾತನಾಡಿದ್ದಾರೆ. ಒಂದು ವೇಳೆ ಬಿಜೆಪಿ ರಾಷ್ಟ್ರ ನಾಯಕರಲ್ಲಿ ನೈತಿಕತೆ ಇದ್ದದ್ದಾದರೆ ಅನಂತ್ ಕುಮಾರ್ ಹೆಗಡೆಯವರನ್ನು ವಜಾ ಮಾಡಲಿ ಎಂದು ಸಂಸದ ಸುರೇಶ್ ಕುಟುಕಿದ್ದಾರೆ.

Comments are closed.