ಕರಾವಳಿ

ಮಂಗಳೂರಿನ ಅರುಣ್ ಜ್ಯುವೆಲ್ಲರ್ಸ್ ದರೋಡೆ ಆರೋಪಿ ಹಾಗೂ ಖಾಲಿಯಾ ರಫೀಕ್ ಕೊಲೆಯ ಪ್ರಮುಖ ಸೂತ್ರಧಾರ ತಸ್ಲೀಮ್ ಬರ್ಬರ ಹತ್ಯೆ

Pinterest LinkedIn Tumblr

ಮಂಗಳೂರು / ಬಂಟ್ವಾಳ, ಫೆಬ್ರವರಿ.02: ಕೊಲೆ ಪ್ರಕರಣ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಿರುವ ವ್ಯಕ್ತಿಯೋರ್ವನ ಶವ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಬೊಳ್ಳಯಿ ಸಮೀಪದ ನಗ್ರಿ ಬಳಿಯ ಶಾಂತಿ ನಗರ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಸಂದರ್ಭಕೊಲೆಯಾದ ವ್ಯಕ್ತಿ ರಾಬರಿ ಮತ್ತು ಕೊಲೆ ಆರೋಪಿಯಾಗಿದ್ದು, ಕೇರಳ ಮೂಲದ ನಿವಾಸಿ ತಸ್ಲೀಮ್ (45) ಎಂದು ಹೇಳಲಾಗಿದೆ.

ಈತ ಖಾಲಿಯಾ ರಫೀಕ್ ಕೊಲೆಯ ಪ್ರಮುಖ ಸೂತ್ರಧಾರನಾಗಿದ್ದು, ಕೇರಳದ ನಟೋರಿಯಸ್ ಜಿಯಾ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದಲ್ಲದೇ, ಹಲವಾರು ಅಪರಾಧ ಹಿನ್ನಲೆವುಳ್ಳವನಾಗಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಭಾನುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಸಜಿಪಮುನ್ನೂರು ಗ್ರಾಮದ‌ ನಗ್ರಿ ಬಳಿಯಲ್ಲಿ ಬಂದು‌ನಿಂತ ಕಾರು ಮಧ್ಯಾಹ್ನದವರೆಗೆ ಅಲ್ಲಿಯೇ ಇದ್ದುದನ್ನು ಗಮನಿಸಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ಪರಿಶೀಲಿಸಿದ ವೇಳೆ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳ್ಳಿರಿಸಿದಲ್ಲೇ ಹಗ್ಗ ಬಿಗಿದು ಬಳಿಕ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದು ಕೊಲೆಗೈದಂತೆ ಕಂಡುಬಂದಿದೆ. ಬೇರೆ ಯಾವುದೋ ಪ್ರದೇಶದಲ್ಲಿ ಕೊಲೆ ನಡೆಸಿ ಬಳಿಕ ಶಾಂತಿ ನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಗುಡ್ಡ ಪ್ರದೇಶದಲ್ಲಿ ಕಾರು ನಿಲ್ಲಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ:

ದ.ಕ.ಸೇರಿದಂತೆ ಹಲವೆಡೆಗಳಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೃತ ತಸ್ಲೀಮ್ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂಬ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. 2019ರಲ್ಲಿ ಬಂದರು ಠಾಣಾ ವ್ಯಾಪ್ತಿಯಲ್ಲಿ ಅರುಣ್ ಜ್ಯುವೆಲ್ಲರಿ ಶಾಪ್ ನಲ್ಲಿ ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ ಗುಲ್ಬರ್ಗ ಜೈಲು ಸೇರಿದ್ದ. ಬಳಿಕ ಅಲ್ಲಿಂದ ಜಾಮೀನು ಮೂಲಕ ಬಿಡುಗಡೆಯಾಗಿದ್ದ.

ಬಿಡುಗಡೆಯಾದ ಕೂಡಲೇ ಈತನನ್ನು ಗ್ಯಾಂಗ್ ವೊಂದು ಕಾರಿನಲ್ಲಿ ಹಾಕಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗುಲ್ಬರ್ಗ ಪೊಲೀಸ್ ಠಾಣೆಯಲ್ಲಿ ಈತನ ಕಿಡ್ನಾಪ್ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ.

2017 ರಲ್ಲಿ ಉಳ್ಳಾಲದಲ್ಲಿ ನಡೆದ ಖಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದು, ಖಾಲಿಯಾ ರಫೀಕ್ ಕೊಲೆಗೆ ಸೇಡು ತೀರಿಸಿಕೊಂಡಿದೆಯೋ ಅಥವಾ ಇನ್ನಾವುದೋ ಕಾರಣಕ್ಕೆ ಕೊಲೆ ನಡೆಸಿದೆಯಾ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ. ಬಂಟ್ವಾಳ ಪೊಲೀಸರು ಮುಂದಿನ ತನಿಖೆ ಕೈಗೊಡೀದ್ದಾರೆ.

Comments are closed.