ಕರ್ನಾಟಕ

ಕೊನೆಗೂ ಸಂಪುಟ ವಿಸ್ತರಣೆಗೆ ಕೂಡಿ ಬಂದ ಕಾಲ; ಫೆಬ್ರವರಿ 6 ರಂದು 10.30 ಕ್ಕೆ ಫಿಕ್ಸ್

Pinterest LinkedIn Tumblr

ಬೆಂಗಳೂರು: ಕೊನೆಗೂ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಫೆಬ್ರವರಿ 6 ರಂದು ಗುರುವಾರ ಬಿಎಸ್‌ವೈ ಸಂಪುಟ ವಿಸ್ತರಣೆ ನಡೆಸಲಿದ್ದಾರೆ. ಬೆಳಗ್ಗೆ 10.30 ರಾಜಭವನದಲ್ಲಿ ಪ್ರತಿಜ್ಞಾವಿಧಿ ನಡೆಯಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಂಪುಟ ವಿಸ್ತರಣೆಯ ದಿನಾಂಕವನ್ನು ಪ್ರಕಟಿಸಿದರು.

ಸಂಪುಟ ವಿಸ್ತರಣೆ ಕುರಿತಾಗಿ ವರಿಷ್ಠರ ಒಪ್ಪಿಗೆ ಪಡೆಯಲು ಬಿಎಸ್‌ವೈ ಗುರುವಾರ ದೆಹಲಿಗೆ ತೆರಳಿದ್ದರು. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಯ ಒಪ್ಪಿಗೆಯನ್ನು ಪಡೆದುಕೊಂಡಿದ್ದರು. ಅದರಂತೆ ಫೆಬ್ರವರಿ ಆರರಂದು ಸಂಪುಟ ವಿಸ್ತರಣೆ ಮಾಡಲು ಸಿಎಂ ನಿರ್ಧಾರ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್. ಶಂಕರ್‌ಗೆ ಭರವಸೆ ನೀಡಿದಂತೆ ಎಂಎಲ್‌ಸಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗುವುದು . 17 ಜನರ ತ್ಯಾಗದಿಂದಲೇ ಅಧಿಕಾರಕ್ಕೆ ಬಂದಿದ್ದೇವೆ, ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಇದೆ ಎಂದರು.

ಉಪ ಚುನಾವಣೆಯಲ್ಲಿ ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದಿದ್ದಾರೆ. ಇನ್ನು ಸೋತವರಿಗೆ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಬಿಎಸ್‌ವೈ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸಂಪುಟ ವಿಸ್ತರಣೆಯೋ ಅಥವಾ ಪುನರರಾಚನೆಯೋ ಎಂಬುವುದು ಸೋಮವಾರ ತಿಳಿದುಬರಲಿದೆ. ಯಾರು ಸಂಪುಟದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುವುದು ಗುರುವಾರ ತಿಳಿಯಲಿದೆ. ಆದರೆ ಕೊಟ್ಟ ಭರವಸೆಯನ್ನು ನಾವು ಈಡೇರಿಸುತ್ತೇವೆ ಎಂದರು.

ಸಂಪುಟ ವಿಸ್ತರಣೆ ಘೋಷಣೆ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ಲಾಬಿ ಜೋರಾಗಿದೆ. ಬಿಎಸ್‌ವೈ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಗೆದ್ದ 11 ಶಾಸಕರ ಪೈಕಿ 10 ಜನರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಸಿಎಂ ತಿಳಿಸಿದ್ದು ಶಾಸಕ ಮಹೇಶ್ ಕುಮಟಳ್ಳಿಯನ್ನು ಕೈಬಿಡಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Comments are closed.