ಕರ್ನಾಟಕ

ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿ: ವಿಶ್ವನಾಥ್‌

Pinterest LinkedIn Tumblr


ಮೈಸೂರು: ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆರೆಯಲು ನಾವು 17 ಮಂದಿ ಸಚಿವ ಸ್ಥಾನ, ಶಾಸಕ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದೇವೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡು, ನಮ್ಮ ಹೋರಾಟಕ್ಕೆ ಗೌರವ ಕೊಡಬೇಕಿದೆ ಎಂದು ಎಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಅವರು, ಸೋತವರಿಗೆ ಸಚಿವ ಸ್ಥಾನವಿಲ್ಲ ಎಂಬ ಡಾ| ಕೆ.ಸುಧಾಕರ್‌ ಮತ್ತು ಎಸ್‌.ಟಿ.ಸೋಮಶೇಖರ್‌ ಹೇಳಿಕೆಗೆ ತಿರುಗೇಟು ನೀಡಿದರು.

ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಯಡಿಯೂರಪ್ಪ ಸ್ಪಷ್ಟ ನಿಲುವು ಹೊಂದಿದ್ದಾರೆ. ಸುಧಾಕರ್‌ ಡಾಕ್ಟರ್‌, ನಾನು ಲಾಯರ್‌. ಹೀಗಾಗಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾನು ಓದಿಕೊಂಡಿದ್ದೇನೆ. ನೀವು ಚುನಾವಣೆಗೆ ಸ್ಪರ್ಧಿಸಿ, ಅರ್ಹರಾಗಿ ಬನ್ನಿ ಎಂದು ಕೋರ್ಟ್‌ ಹೇಳಿದೆಯೇ ಹೊರತು, ಸೋಲು-ಗೆಲುವಿನ ಬಗ್ಗೆ ತೀರ್ಪಿನಲ್ಲಿ ಹೇಳಿಲ್ಲ. ಡಾಕ್ಟರ್‌ ಆಗಿರುವ ಸುಧಾಕರ್‌, ವಕೀಲರ ಬಳಿ ತೀರ್ಪಿನ ಪ್ರತಿ ತರಿಸಿಕೊಂಡು ಓದಿ, ಅರ್ಥಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಈ ರಾಜಕೀಯ ಹೋರಾಟಕ್ಕೆ ಬಿಜೆಪಿ ವರಿಷ್ಠರು ಮತ್ತು ಯಡಿಯೂರಪ್ಪ ಗೌರವ ಕೊಡಬೇಕು. ಸಚಿವ ಸ್ಥಾನ ಕೊಡಲು ಸೋತರು ಎಂಬ ಕಾರಣ ನೀಡಬಾರದು. ಹಾಗಾದರೆ ಉಪ ಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ?. ಹಾಗೊಂದು ವೇಳೆ ನನಗೆ ಸಚಿವ ಸ್ಥಾನ ಸಿಗದಿದ್ದರೆ ಆಕಾಶವೇನೂ ಬೀಳಲ್ಲ. ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಅಂದರೆ ಅದು ಯಡಿಯೂರಪ್ಪ ಮಾತ್ರ. ಬಿಎಸ್‌ವೈ ಮೇಲೆ ನಂಬಿಕೆಯಿದೆ ಎಂದರು.

Comments are closed.