ಕರ್ನಾಟಕ

ಬಡ ಹಿಂದೂಗಳ ಮೇಲೂ ಸಿಎಎ ಜಾರಿ: ವೈ.ಎಸ್.ವಿ.ದತ್ತಾ

Pinterest LinkedIn Tumblr


ಚಿಕ್ಕಮಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಮೇಲ್ನೋಟಕ್ಕೆ ಬಡ ಮುಸ್ಲಿಮರ ವಿರುದ್ಧವಾದರೂ, ಶೀಘ್ರದಲ್ಲೇ ಬಡ ಹಿಂದೂಗಳ ವಿರುದ್ಧವೂ ಜಾರಿ ಮಾಡುವ ಹುನ್ನಾರ ಅಡಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಸಿಎಎ ಹಾಗೂ ಎನ್‍ಆರ್ ಸಿ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಗತ್ಯವಿಲ್ಲದಿದ್ದರೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ಮಾಡಿರುವ ಹಠ ಏನನ್ನು ಹೇಳುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇದೀಗ ತೊಂದರೆಗೀಡಾಗಿರುವ ಬಡ ಮುಸ್ಲಿಮರ ಸ್ಥಿತಿಯೇ ನಾಳೆ ಬೇರೆ ಧರ್ಮದ ಬಡವರಿಗೂ ಬರಲಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದ್ದು, ದೇಶದ ಪರಿಸ್ಥಿತಿ ಸಂಕೀರ್ಣ ಘಟ್ಟದಲ್ಲಿದೆ. ಇಂದಿನ ಸ್ಥಿತಿ ಮುಂದೆ ಏನು ಎಂಬ ಪ್ರಶ್ನೆ ಹುಟ್ಟಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಅಪಾಯಗಳ ಬಗ್ಗೆ ನಾನು ಮತನಾಡಲು ಸಿದ್ಧ, ಈ ಕಾಯ್ದೆ ಪರ ಮಾತನಾಡುವವರೂ ಚರ್ಚೆಗೆ ಬರಲಿ ಎಂದು ಬಹಿರಂಗ ಸವಾಲು ಹಾಕಿದರು.

ಪಿರಿಯಾಪಟ್ಟಣದ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಮಾತನಾಡಿ, ಮೂಲ ನಿವಾಸಿಗಳ ಪೌರತ್ವ ಕೇಳುವುದು ಭಾರತೀಯರಿಗೆ ಮಾಡುವ ಅವಮಾನ. ದೇಶಕ್ಕೆ ತ್ರಿವರ್ಣ ಧ್ವಜ ನೀಡಿದ ನಾವು ದೇಶದ ಹಕ್ಕುದಾರರು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮಸ್ಲಿಮರಿಗಷ್ಟೇ ತೊಂದರೆಯಲ್ಲ, ಎಲ್ಲರಿಗೂ ಇದೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಹುನ್ನಾರವನ್ನು ಜಾತಿ-ಧರ್ಮ ರಹಿತವಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.

ಮುಸ್ಲಿಮರು ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದರ ಜೊತೆಗೆ ಸಂವಿಧಾನ ಓದಿ, ಅರ್ಥೈಸಿಕೊಳ್ಳಬೇಕು. ಸೋದರತ್ವ ಭಾವನೆಯಿಂದ ಬಾಳುತ್ತಿರುವ ನಾವು, ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಿಂತು ಭಾರತಾಂಭೆಯ ಬಾವುಟಕ್ಕಾಗಿ ಹೋರಾಡುತ್ತಿದ್ದೇವೆ. ನಮ್ಮ ಹೋರಾಟ ಸಂವಿಧಾನದ ಪರವೇ ಹೊರತು ವ್ಯಕ್ತಿ, ಧರ್ಮದ ವಿರುದ್ಧವಲ್ಲ ಎಂದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಜಿಲ್ಲಾ ಪಂಚಾಯಿತಿ ಸದಸ್ಯ ಶರತ್ ಕೃಷ್ಣಮೂರ್ತಿ, ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ ಉಪಸ್ಥಿತರಿದ್ದರು. ಪ್ರತಿಭಟನೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments are closed.