ಕರ್ನಾಟಕ

ಇಬ್ಬರು ಹೆಂಡತಿಯರ ಮಧ್ಯೆ ಜಗಳ ಓರ್ವಳ ಕೊಲೆಯಲ್ಲಿ ಅಂತ್ಯ

Pinterest LinkedIn Tumblr


ಮಡಿಕೇರಿ: ಓರ್ವ ಇಬ್ಬರನ್ನು ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದು, ಇಬ್ಬರು ಪತ್ನಿಯರ ನಡುವೆ ಕಲಹ ಏರ್ಪಟ್ಟು ಮೊದಲನೆಯ ಪತ್ನಿ ಎರಡನೆಯ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೆಕಾಡು ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ಸಂಜೆ ನಡೆದಿದ್ದು, ಮೂಲತಃ ಜಾರ್ಖಂಡ್ ರಾಜ್ಯದ ದಯಾನಂದ್‍ನ ಮೊದಲನೆಯ ಪತ್ನಿ ಆಶಿಕಾ ಗುಪ್ತ (26) ಎಂಬಾಕೆ ಎರಡನೆಯ ಪತ್ನಿ ವಶಿಕಾ ದೇವಿ (27) ಯನ್ನು ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾಳೆ.

ದಯಾನಂದ್ ಕಳೆದ 7 ವರ್ಷಗಳ ಹಿಂದೆ ಆಶಿಕಾ ಗುಪ್ತಳನ್ನು ಮದುವೆಯಾಗಿದ್ದು, ಬಳಿಕ ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಮೊದಲನೆಯ ಪತ್ನಿಗೆ ಒಂದು ಮಗು ಹಾಗೂ ಎರಡನೆಯ ಪತ್ನಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಹೆಂಡತಿ ಮೂರು ಮಕ್ಕಳೊಂದಿಗೆ ಸಿದ್ದಾಪುರ ಸಮೀಪದ ಬಳಂಜಿಗೆರೆ ಖಾಸಗಿ ತೋಟದ ಲೈನ್ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು.

ಮೂವರು ಜೊತೆಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿ ಸಣ್ಣ ಪುಟ್ಟ ಮಾತಿನ ಕಲಹಗಳು ಏರ್ಪಟ್ಟಿತು ಎನ್ನಲಾಗಿದೆ. ಶನಿವಾರ ಪತಿಯೊಂದಿಗೆ ಇಬ್ಬರು ತೋಟದ ಕೆಲಸಕ್ಕೆ ತೆರಳಿ ಲೈನ್ ಮನೆಗೆ ಹಿಂತಿರುಗಿದಾಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಕಲಹ ಏರ್ಪಟ್ಟು ಆಶಿಕಾ ಗುಪ್ತ ವಶಿಕಾ ದೇವಿಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ. ತೀವ್ರ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ.

ದಯಾನಂದ್ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದು ನೋಡಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.