ಮುಂಬೈ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆಯ ನಾಯಕ – ಮೊದಲ ಭಿನ್ನಮತ ಸ್ಫೋಟ

Pinterest LinkedIn Tumblr


ಮುಂಬೈ: ಕಾಂಗ್ರೆಸ್ ಹಾಗೂ ಕೆಲ ಶಿವಸೇನೆ ನಾಯಕರಲ್ಲಿ ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಇನ್ನೊಂದು ಆಘಾತ ಉಂಟಾಗಿದ್ದು, ಶಿವಸೇನೆ ನಾಯಕ ಅಬ್ದುಲ್ ಸತ್ತಾರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ರಾಜೀನಾಮೆಯನ್ನು ಅಂಗೀಕರಿಸಿಲ್ಲ, ಬದಲಿಗೆ ನಾಳೆ ಮಾತುಕತೆ ನಡೆಸುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡದೇ ಕೇವಲ ರಾಜ್ಯ ಸಚಿವರನ್ನಾಗಿ ಮಾಡಿರುವುದು ಅಬ್ದುಲ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಬ್ದುಲ್ ಸತ್ತಾರ್ ಅವರು ಕಾಂಗ್ರೆಸ್ ತೊರೆದು ಶಿವಸೇನೆಗೆ ಸೇರ್ಪಡೆಯಾಗಿದ್ದರು.

ಔರಂಗಬಾದ್ ಶಾಸಕ ಅಬ್ದುಲ್ ಸತ್ತಾರ್ ಅವರ ರಾಜೀನಾಮೆಯನ್ನು ಶಿವಸೇನೆ ಅಂಗೀಕರಿಸಿಲ್ಲ. ಈ ಕುರಿತು ಶಿವಸೇನೆಯ ಹಿರಿಯ ನಾಯಕ ಎಕ್ನಾಥ್ ಶಿಂಧೆ ಮಾಹಿತಿ ನೀಡಿ, ಅವರ ರಾಜೀನಾಮೆಯನ್ನು ನಾವು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸದ ಹಾಗೂ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅಬ್ದುಲ್ ಅವರೊಂದಿಗೆ ಮಾತನಾಡಲಿದ್ದಾರೆ. ಸಚಿವ ಸಂಪುಟ ರಚನೆ ವೇಳೆ ಇದೆಲ್ಲ ಸಾಮಾನ್ಯ. ಸೂಕ್ತ ಸ್ಥಾನಮಾನ ಸಿಗದ್ದಕ್ಕೆ ಕೆಲವು ನಾಯಕರು ಅಸಮಾಧಾನಗೊಂಡಿರುವುದು ಸತ್ಯ. ಇದು ಶಿವಸೇನೆ ಸರ್ಕಾರವಲ್ಲ, ಬದಲಿಗೆ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ಎಂಬುದನ್ನು ಎಲ್ಲ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಹೊರಗಿನಿಂದ ಬಂದರೂ ಸಹ ಸಚಿವ ಸಂಪುಟದಲ್ಲಿ ಅಬ್ದುಲ್ ಅವರಿಗೆ ಸ್ಥಾನ ನೀಡಲಾಗಿದೆ. ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ ನಂತರ ಸತ್ತಾರ್ ಅವರ ಅಸಮಾಧಾನ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಇತ್ತೀಚೆಗಷ್ಟೇ ಎಲ್ಲ ಸಚಿವರೊಂದಿಗೆ ಸತ್ತಾರ್ ಸಹ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಚಿವ ಸ್ಥಾನ ಸಿಗದ್ದಕ್ಕೆ ಕಾಂಗ್ರೆಸ್ ನಾಯಕರು ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶಿವಸೇನೆ ಶಾಸಕ ಸಹ ಆಕ್ರೋಶಗೊಂಡಿದ್ದಾರೆ.

ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ಸಹಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ನಂತರ ಕಾಂಗ್ರೆಸ್ ನಾಯಕರು ಸಹ ಅಸಮಾಧಾನ ಹೊರ ಹಾಕಿ, ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು.

ಮಹಾರಾಷ್ಟ್ರದ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌವ್ಹಾಣ್ ಸೇರಿದಂತೆ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರಾದ ಚೌವ್ಹಾಣ್, ನಸೀಮ್ ಖಾನ್, ಪ್ರಣಿತಿ ಶಿಂಧೆ, ಸಂಗ್ರಾಮ್ ತೋಪ್ಟೆ, ಅಮಿನ್ ಪಟೇಲ್ ಹಾಗೂ ರೋಹಿದಾಸ್ ಪಾಟೀಲ್ ಅವರು ಸೋಮವಾರ ಸಂಜೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದರು.

ಡಿ.30ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಹಾಗೂ 34 ಇತರ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ಸರ್ಕಾರ ರಚನೆಯಾಗಿ ಒಂದು ತಿಂಗಳ ನಂತರ ಸಚಿವ ಸಂಪುಟ ರಚನೆಯ ಪ್ರಹಸನಕ್ಕೆ ವಿರಾಮ ಬಿದ್ದಿತ್ತು. ಇದೀಗ ಕಾಂಗ್ರೆಸ್ ಹಾಗೂ ಸ್ವತಃ ಕೆಲ ಶಿವಸೇನೆ ನಾಯಕರಲ್ಲಿಯೇ ಅಸಮಾಧಾನ ಭುಗಿಲೆದ್ದಿದ್ದು, ಇದು ಸಿಎಂ ಉದ್ಧವ್ ಠಾಕ್ರೆಗೆ ಸವಾಲಾಗಿ ಪರಿಣಮಿಸಿದೆ.

Comments are closed.