ಕರ್ನಾಟಕ

ಆ ಒಂದು ನಿಗೂಢ ಘಟನೆಯಿಂದ 10 ವರ್ಷದಿಂದ ಊರಿಗೆ ಊರೇ ಖಾಲಿ

Pinterest LinkedIn Tumblr


ಬಳ್ಳಾರಿ: ಮಲೆನಾಡು ಸೌಂದರ್ಯ ನೆನಪು ಮಾಡುವ ಬಿಸಿಲನಾಡಿನಲ್ಲಿರುವ ಗ್ರಾಮವದು. ಎಲ್ಲ ಗ್ರಾಮಗಳಂತೆ ಅಲ್ಲಿಯ ಜನ ಕೃಷಿ, ತೋಟಗಾರಿಕೆ, ಕುಲಕಸುಬನ್ನು ಮಾಡಿಕೊಂಡು ಸುಖಸಮೃದ್ಧಿಯಿಂದಿದ್ದರು. ಆದರೆ ಇದ್ದಕ್ಕಿದ್ದಂತೆ ಒಬ್ಬರ ನಂತರ ಒಬ್ಬರು ಮನೆ ಬಿಟ್ಟು ಹೋಗಲು ಶುರುಮಾಡಿದರು. ಕೆಲ ತಿಂಗಳಿನಲ್ಲಿಯೇ ಊರಿಗೆ ಊರೇ ಖಾಲಿಯಾಯಿತು. ಇದಾಗಿ ಬರೋಬ್ಬರಿ ಹತ್ತು ವರ್ಷಗಳೇ ಕಳೆದಿವೆ. ಆ ಗ್ರಾಮದಲ್ಲಿ ಯಾರಂದರೆ ಯಾರೂ ಇಲ್ಲ. ಅಷ್ಟಕ್ಕೂ ಅಲ್ಲಿಯ ಜನ ಗ್ರಾಮ ಬಿಡಲು ಕಾರಣವೇನು? ಆ ಒಂದು ಘಟನೆಯಿಂದ ಗ್ರಾಮಕ್ಕೆ ಗ್ರಾಮವೇ ಹೇಗೆ ಖಾಲಿಯಾಯಿತು. ಹತ್ತು ವರ್ಷದಿಂದ ಖಾಲಿಯಾಗಿ, ಬಣಗುಡುತ್ತಿರುವ ಆ ಗ್ರಾಮದ ಇದ್ದ ಸ್ಥಿತಿ ಏನು?

ಸಾವಿರಾರು ವರುಷಗಳ ಹಿಂದಿನ ವಿಜಯನಗರ ಸಾಮ್ರಾಜ್ಯದ ಇಂದಿನ ಸ್ಥಿತಿಗತಿ ನೋಡಿದರೆ ಬೇಸರವಾಗುತ್ತದೆ. ಆದರೆ ನಮ್ಮ-ನಿಮ್ಮಂತೆ ಬೆಳೆದ 120ಕ್ಕೂ ಹೆಚ್ಚು ಜನ ಆಡಿಬೆಳೆದ ಗ್ರಾಮ, ಕೇವಲ ಹೆಸರಿಗಷ್ಟೇ ಉಳಿದುಬಿಟ್ಟಿದೆ. ಇಂಥದೊಂದು ಗ್ರಾಮದ ಹೆಸರೇ ಬಾಂಬಿ ಕಾಲೋನಿ. ಮೊದಲೆಲ್ಲ ಜನರು ಇದನ್ನು ಬಾಂಬೆ ಕಾಲೋನಿಯಂತಲೇ ಕರೆಯುತ್ತಿದ್ದರು.

ಹಿಂದಿ ಹೆಚ್ಚಾಗಿ ಮಾತಾಡೋದ್ರಿಂದ ಈ ಹೆಸರು ಊರಿಗೆ ಬಂದಿತ್ತು ಎನ್ನುತ್ತಾರೆ ತಿಳಿದವರು. ಅಂದಹಾಗೆ ಇಂಥದೊಂದು ನತದೃಷ್ಟ ಗ್ರಾಮವಿರೋದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ. ರಾಯಪುರ ಅಂಚೆ, ಅಪ್ಪೇನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಬಾಂಬಿ ಕಾಲೋನಿ ಗ್ರಾಮ ಎಲ್ಲಿ ಬರುತ್ತದೆ ಎಂದು ಹುಡುಕಿದರೆ, ಕೇಳಿದರೆ ಯಾರೂ ಹೇಳೋದಿಲ್ಲ. ಈ ಗ್ರಾಮವಿತ್ತೆಂದು ಹತ್ತು ವರ್ಷಗಳ ಹಿಂದಿನ ದಾಖಲೆಗಳಲ್ಲಿದೆ. ಆದರೆ ಇದೀಗ ಈ ಗ್ರಾಮ ಖಾಲಿ ಖಾಲಿ. ಸುತ್ತಮುತ್ತಲಿನ ಹಳ್ಳಿಯ ಯುವಕರು, ಹುಡುಗರನ್ನು ಕೇಳಿದರೆ ಯಾರಿಗೂ ಈ ಗ್ರಾಮದ ಬಗ್ಗೆ ಮಾಹಿತಿಯಿಲ್ಲ. ಹಿರಿಯರಿಗೆ ಗೊತ್ತಿದ್ದರೂ ಇದರ ಗೊಡವೆ ಬೇಡವೆಂದು ಸುಮ್ಮನಾಗುತ್ತಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಜರುಗಿದ ಆ ಒಂದೇ ಒಂದು ಘಟನೆಯಿಂದ ಗ್ರಾಮಕ್ಕೆ ಗ್ರಾಮವೇ ಖಾಲಿಯಾಯಿತೆಂದರೆ ನೀವು ನಂಬಲೇಬೇಕು. ಮೊದಲೆಲ್ಲ ತುಂಬ ಸುಖ ಸಂತೋಷದಿಂದ ಕೂಡಿದ ಜನರು ಅಲ್ಲಿದ್ದರು. 120ಕ್ಕೂ ಹೆಚ್ಚು ಜನರಿದ್ದ ಬಾಂಬಿ ಕಾಲೋನಿ ಗ್ರಾಮಸ್ಥರು ಕಷ್ಟಪಟ್ಟು ದುಡಿದು ಕೃಷಿ ಮಾಡಿ, ತೋಟಗಾರಿಕೆ ಮಾಡಿ, ತಮ್ಮ ಕುಲಕಸುಬನ್ನು ಮರೆಯದೆ ಮುಂದುವರೆಸಿಕೊಂಡು ಹೋಗುತ್ತಿದ್ದರು. ಆದರೆ 2009ರಲ್ಲಿ ಆ ಗ್ರಾಮದ ಮುಖಂಡ ಹನುಮಂತಪ್ಪ ಎಂಬುವರು ಇದ್ದಕ್ಕಿದ್ಧಂತೆ ನಾಪತ್ತೆಯಾಗುತ್ತಾರೆ. ಇವರು ಇಲ್ಲಿಯವರೆಗೆ ಎಲ್ಲಿದ್ದಾರೆ? ಎಲ್ಲಿಗೆ ಹೋದರು ಎಂಬ ಬಗ್ಗೆ ಒಂದಿಂಚೂ ಮಾಹಿತಿಯಿಲ್ಲ.

ಆದರೆ ಇಲ್ಲಿಯ ಸುತ್ತಮುತ್ತಲಿನ ಈ ಮುಖಂಡ ಹನುಮಂತಪ್ಪ ಕೊಲೆಯಾಗಿದ್ದಾನೆ ಎಂದೇ ಮಾತಾಡಿಕೊಳ್ಳುತ್ತಾರೆ. ಕಳೆದ ಐವತ್ತು ವರುಷಗಳಿಂದಿರುವ ಬಾಂಬಿ ಕಾಲೋನಿ ಗ್ರಾಮದಲ್ಲಿ ಹನುಮಂತಪ್ಪ ಕಾಣೆಯಾಗಿದ್ದು ಹತ್ತಿರದ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗುತ್ತದೆ. ಹನುಮಂತಪ್ಪ ನಾಪತ್ತೆಯಾಗಲು ಕಾರಣರಾರು ಎಂದು ಪೊಲೀಸರು ತನಿಖೆ ಆರಂಭಿಸುತ್ತಾರೆ. ಇದಾದ ಮೇಲೆ ನಡೆದ ಹನುಮಂತಪ್ಪ ಕೇಸ್ ನಮ್ಮ ಮೇಲೆ ಬರುತ್ತದೆ ಎಂಬ ಭಯಕ್ಕೋ? ದಾಯಾದಿ ಕಲಹಗಳಿಗೆ ಹೆದರಿಯೋ? ಆಸ್ತಿ ಸಂಬಂಧವೋ? ಅಲ್ಲಿ ನಡೆಯುವ ನಿಗೂಢ ಘಟನೆಗಳಿಂದಲೋ ಪೊಲಿಸ್ ಸ್ಟೇಷನ್-ಕೋರ್ಟು-ಕಚೇರಿ ಅಲೆದಾಟಕ್ಕೆ ಹೆದರಿ ಅಲ್ಲಿರುವ ಗ್ರಾಮಸ್ಥರು ಒಬ್ಬೊಬ್ಬರಾಗಿ ಗ್ರಾಮವನ್ನೇ ಬಿಟ್ಟು ತಮಗನುಕೂಲವಾಗುವ ಸುತ್ತಮುತ್ತಲ ಪ್ರದೇಶಗಳಿಗೆ ತೆರಳಿದ್ದಾರೆ.

ಅಲ್ಲಿಯೇ ಇದ್ದ ಹೊಲ-ಗದ್ದೆಗಳನ್ನು ಗುತ್ತಿಗೆ ನೀಡಿ, ಮಾರಿ ಹೋದರು ಎನ್ನುತ್ತಾರೆ ಅಪ್ಪೇನಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ಪಾಪಣ್ಣ. 2009ರ ಘಟನೆ ನಡೆದು ಹತ್ತು ವರ್ಷಗಳೇ ಕಳೆದಿವೆ. ಆದರೆ ಈ ಬಾಂಬಿ ಗ್ರಾಮದಲ್ಲಿ 2006-07ರಲ್ಲಿ ಸಾಕಷ್ಟು ಹೋರಾಟ ಮಾಡಿ ಕಟ್ಟಿಸಿದ ಕಿರಿಯ ಪ್ರಾಥಮಿಕ ಶಾಲೆ ಹಳೆಯ ಪಳೆಯುಳಿಕೆಯಂತಾಗಿದೆ. ಮನೆಗಳು ಮಾತ್ರವಲ್ಲ ಇಲ್ಲಿಯ ಶಾಲೆಯೂ ತನ್ನ ದುಸ್ಥಿತಿಯನ್ನು ತೋರಿಸುತ್ತಿದೆ. ಹೆಚ್ಚಾಗಿ ಅಲೆಮಾರಿ ಸಮುದಾಯದವರೇ ಇದ್ದ ಈ ಗ್ರಾಮದಲ್ಲಿ ನಾಪತ್ತೆಯಾದ ಹನುಮಂತಪ್ಪ ನಿಗೂಢ ಪ್ರಕರಣ ಇದುವರೆಗೂ ಬಗೆಹರೆಯದ ಕಾರಣ ಈ ಗ್ರಾಮ ಇದ್ದೂ ಇಲ್ಲದಂತಿದೆ.

Comments are closed.