ಕರ್ನಾಟಕ

ಅವನೇ ತಂದೆ ಎನ್ನಲು ಒಂದೇ ಆಧಾರ್‌, ಪ್ರಕರಣ ಗೆದ್ದ ಮಹಿಳೆ

Pinterest LinkedIn Tumblr


ಬೆಂಗಳೂರು: ಮಕ್ಕಳ ಆಧಾರ್‌ ಕಾರ್ಡ್‌, ಪಡಿತರ ಚೀಟಿ ಮತ್ತು ಜನನ ಪ್ರಮಾಣ ಪತ್ರಗಳಲ್ಲಿದ್ದ ತಂದೆಯ ಹೆಸರನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರಿನ ಮಹಿಳೆಯೊಬ್ಬರು, ತನ್ನ ಜೊತೆ ದೈಹಿಕ ಸಂಬಂಧ ಹೊಂದಿ ಆನಂತರ ಮದುವೆಯಾಗಿದ್ದ ಗಂಡನ ವಿರುದ್ಧ ಕೇಸ್‌ ದಾಖಲಿಸಿ ಜಯಿಸಿದ್ದಾರೆ.

ಅಲ್ಲದೆ, ಆಕೆ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಅಡಿ ಪರಿತ್ಯಕ್ತ ಪತಿಯಿಂದ ಪ್ರತಿ ತಿಂಗಳು 5 ಸಾವಿರ ರೂ. ಪರಿಹಾರವನ್ನು ಪಡೆಯುವಲ್ಲಿಯೂ ಸಹ ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯದ ರತ್ನ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ಅರ್ಜಿಯನ್ನು ಆಲಿಸಿರುವ ನ್ಯಾ.ಬಿ.ಎ. ಪಾಟೀಲ್‌ ಅವರಿದ್ದ ಹೈಕೋಟ್‌ನ ಏಕಧಿಸದಸ್ಯಧಿಪೀಠವು, ”ಪ್ರತಿವಾದಿ ಪತಿ ಆಗಾಗ ಅರ್ಜಿದಾರಳ ಮನೆಗೆ ಹೋಗುತ್ತಿದ್ದರು. ಆಕೆಯೊಂದಿಗೆ ದೈಹಿಕ ಸಂಬಂಧವನ್ನೂ ಹೊಂದಿದ್ದ ಆತ ಎರಡು ಮಕ್ಕಳ ಜನನಕ್ಕೂ ಕಾರಣವಾಗಿದ್ದಾರೆ. ಹಾಗಾಗಿ ಆತ ಪ್ರತಿ ತಿಂಗಳು ಆಕೆಗೆ ಜೀವನಾಂಶ ರೂಪದಲ್ಲಿ ಪರಿಹಾರ ನೀಡಲೇಬೇಕು,” ಎಂದು ಆದೇಶಿಸಿದೆ.

ಅಧೀನ ನ್ಯಾಯಾಲಯಗಳು ಆಕೆಯ ಪ್ರಕರಣವನ್ನು ನಿರ್ವಹಿಸಲು ವಿಫಲವಾಗಿವೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ”ಪತಿ ತನ್ನ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ಆಕೆ ಪತ್ನಿಯೇ ಅಲ್ಲ ಎಂದರೆ ಅದನ್ನು ಒಪ್ಪಲಾಗದು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದರೆ, ಪ್ರತಿವಾದಿಯು ಅರ್ಜಿದಾರಳನ್ನು ಮದುವೆಯಾಗಿದ್ದಾರೆ ಮತ್ತು ಅದರಿಂದಾಗಿ ಆಕೆ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆಂಬುದು ಸ್ಪಷ್ಟವಾಗುತ್ತದೆ” ಎಂದು ಹೇಳಿದೆ.

”ಮದುವೆ ಆಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ಮಕ್ಕಳ ದಾಖಲೆಗಳಲ್ಲಿ ತಂದೆಯ ಹೆಸರು ಇದೆ. ಹಾಗಾಗಿ ಆತ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರತಿ ತಿಂಗಳು ಐದು ಸಾವಿರ ಪರಿಹಾರ ನೀಡಬೇಕು,” ಎಂದು ನ್ಯಾಯಾಲಯ ಆದೇಶ ನೀಡಿದೆ. ಮಹಿಳೆಗೆ ಮೊದಲ ಪತಿಯಿಂದ ಎರಡು ಮಕ್ಕಳಿದ್ದಾರೆ, ಮೊದಲ ಪತಿಗೂ ವಿಚ್ಛೇದನ ನೀಡಿಲ್ಲ, ಆತನಿಂದಲೂ ಹಣಕಾಸು ರಕ್ಷಣೆ ಅಥವಾ ನಿರ್ವಹಣಾ ವೆಚ್ಚ ಪಡೆಯುತ್ತಿದ್ದಾಳೆ. ಆ ನಂತರ ಆಕೆ ಇನ್ನೊಂದು ಮದುವೆಯಾಗಿದ್ದಾರೆ ಎಂದು ‘ಪತಿ’ ಆರೋಪಿಸಿದ್ದಾರೆ.

ಆದರೆ ಅದ್ಯಾವುದಕ್ಕೂ ದಾಖಲೆ ಇಲ್ಲದ ಕಾರಣ, ಅವುಗಳನ್ನು ಒಪ್ಪಲಾಗದು ಎಂದು ನ್ಯಾಯಪೀಠ ಆತನ ವಾದವನ್ನು ತಳ್ಳಿಹಾಕಿದೆ. ಅರ್ಜಿದಾರ ಮಹಿಳೆ ಪರ ವಕೀಲ ಜಗದೀಶ್‌ ಶಾಸ್ತ್ರಿ ”ಪ್ರತಿವಾದಿಯು ಅರ್ಜಿದಾರ ಮಹಿಳೆಯನ್ನು ನಂಬಿಸಿ ಮದುವೆಯಾಗಿ ಆನಂತರ ಆಕೆಯನ್ನು ನಿರ್ಲಕ್ಷಿಸಿ, ಬೇರೊಂದು ಮಹಿಳೆಯ ಜೊತೆ ಅನೈತಿಕ ಸಂಪರ್ಕ ಬೆಳೆಸಿದ್ದಾನೆ. ಆದರೆ ಆಕೆಗೆ ನ್ಯಾಯಯುತವಾಗಿ ಜೀವನಾಂಶ ಸೇರಿದಂತೆ ಯಾವುದೇ ಆರ್ಥಿಕ ಸಹಾಯ ನೀಡುತ್ತಿಲ್ಲ”ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

Comments are closed.