ಕರ್ನಾಟಕ

‘ಭಾಷೆ’ಯ ಕಿಚ್ಚು: ಮಹಾರಾಷ್ಟ್ರ-ಕರ್ನಾಟಕ ಮಧ್ಯೆ ಬಸ್‌ ಸಂಚಾರ ಸಂಪೂರ್ಣ ಬಂದ್‌

Pinterest LinkedIn Tumblr


ಬೆಳಗಾವಿ/ಕಾಗವಾಡ/ನಿಪ್ಪಾಣಿ: ಶಿವಸೇನೆ ಕಾರ‍್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದರಿಂದ ಮಹಾರಾಷ್ಟ್ರ- ಕರ್ನಾಟಕದ ಗಡಿ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಭಾನುವಾರ ಕಾಗವಾಡ – ಮೈಶಾಳ ಗ್ರಾಮಗಳ ಗಡಿಯಲ್ಲಿ ಶಿವಸೇನೆ ಹಾಗೂ ಕರವೇ ಕಾರ್ಯಕರ್ತರು ಎದುರು – ಬದುರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ- ಮಹಾರಾಷ್ಟ್ರ ನಡುವಿನ ಬಸ್‌ ಸಂಚಾರವೂ ರದ್ದಾಗಿದ್ದು ಉಭಯ ರಾಜ್ಯಗಳ ಸಾರಿಗೆ ಬಸ್‌ಗಳು ಗಡಿ ದಾಟಲಿಲ್ಲ.

ಬಿಗುವಿನ ವಾತಾವರಣ

ಭಾನುವಾರ ಮಧ್ಯಾಹ್ನ ಸಾಂಗ್ಲಿ-ಬೆಳಗಾವಿ ರಾಜ್ಯ ಹೆದ್ದಾರಿಯ ಕಾಗವಾಡ- ಮೈಶಾಳದಲ್ಲಿ ಕರವೇ ಕಾರ್ಯಕರ್ತರು ಹಾಗೂ ಶಿವಸೇನೆ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ಮಾಡಿದ್ದಾರೆ. ಕಾಗವಾಡದ ಬಳಿ ಇರುವ ಮಹಾರಾಷ್ಟ್ರದ ಮೈಶಾಳ ಗ್ರಾಮಕ್ಕೆ ಬಂದ ಶಿವಸೇನೆ ಕಾರ‍್ಯಕರ್ತರು ಕರ್ನಾಟಕದ ವಿರುದ್ಧ ಘೋಷಣೆ ಕೂಗಿ ಕರವೇ ಮುಖಂಡರ ಪುತ್ಥಳಿ ಸುಟ್ಟಿದ್ದಾರೆ. ಸುಮಾರು ಎರಡು ಗಂಟೆ ಕಾಲ ಎರಡೂ ಕಡೆಯವರು ಪರಸ್ಪರ ಘೋಷಣೆ ಕೂಗಿದರು. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಶಿವಸೇನೆ ಕಾರ‍್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಾಂಗ್ಲಿಯ ಪೊಲೀಸ್‌ ಅಧಿಕಾರಿಗಳು ಬಂದು ಪರಿಸ್ಥಿತಿ ನಿಯಂತ್ರಿಸಿದರು.

‘‘ಶಿವಸೇನೆ ಕಾರ‍್ಯಕರ್ತರು ಕರವೇ ಪುತ್ಥಳಿ ದಹಿಸಿದ್ದಾರೆ. ಇದು ಖಂಡನೀಯ. ಶಿವಸೇನೆ ಪುಂಡಾಟಿಕೆ ಮುಂದುವರಿದರೆ ಏಟಿಗೆ ಏದುರೇಟು ಕೊಡಲು ನಾವೂ ಸಿದ್ಧ’’ ಎಂದು ಕಾಗವಾಡ ಘಟಕದ ಕರವೇ ಅಧ್ಯಕ್ಷ ಚೇತನ ಪಾಟೀಲ, ಸಿದ್ದು ವಡೆಯರ ಎಚ್ಚರಿದ್ದಾರೆ.

ಗಡಿ ದಾಟದ ಬಸ್‌ಗಳು

ಭಾನುವಾರ ಬೆಳಗ್ಗಿನಿಂದಲೇ ಕರ್ನಾಟಕದ ಬಸ್‌ಗಳ ಮಹಾರಾಷ್ಟ್ರ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಹಾರಾಷ್ಟ್ರದ ಕಡೆಯಿಂದಲೂ ಬಸ್‌ಗಳು ಬರಲಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಹೀಗಾಗಿ ಪ್ರಯಾಣಿಕರು ಖಾಸಗಿ ವಾಹನಗಳ ಮೂಲಕ ಗಡಿ ದಾಟಿ ಬಸ್‌ ಏರಿದರು.

ಬೆಳಗಾವಿ ಸಾರಿಗೆ ವಿಭಾಗದಿಂದ ನಿತ್ಯ 46 ಬಸ್‌ಗಳು ಪುಣೆ, ಕೊಲ್ಲಾಪುರ, ಸಾತಾರಾ, ನಾಸಿಕ್‌, ಮುಂಬಯಿ, ಠಾಣೆ, ಬೊರಿವಿಲಿ, ಕಲ್ಯಾಣ ಒಳಗೊಂಡು ಇತರೆ ಕಡೆಗೆ ತೆರಳುತ್ತವೆ. ಇದರಿಂದ ವಿಭಾಗಕ್ಕೆ ನಿತ್ಯ 5 – 10 ಲಕ್ಷ ರೂ.ಗಳ ಆದಾಯವಿತ್ತು. ಆದರೆ, ಇಂದು ಗಡಿ ಭಾಗದ ಕೊನೆಯ ನಿಲ್ದಾಣ ನಿಪ್ಪಾಣಿವರೆಗೆ ಮಾತ್ರ ಬಸ್‌ಗಳು ಸಂಚರಿಸಿದವು.

‘‘ಸಂಜೆವರೆಗಿನ ಬೆಳವಣಿಗೆ ಆಧರಿಸಿ ಹಾಗೂ ಪೊಲೀಸ್‌ ಸೂಚನೆಗಳನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ವಿಭಾಗದ ನಿಯಂತ್ರಣಾಧಿಕಾರಿ ಎಂ.ಆರ್‌. ಮುಂಜಿ ತಿಳಿಸಿದ್ದಾರೆ. ಚಿಕ್ಕೋಡಿ ಸಾರಿಗೆ ವಿಭಾಗದಿಂದ ನಿತ್ಯ 160 ಬಸ್‌ಗಳು ಇಚರಲಕರಂಜಿ, ಮಿರಜ್‌, ಕೊಲ್ಲಾಪುರ, ಗಡಹಿಂಗ್ಲಜ್‌, ಪುಣೆ, ಮುಂಬಯಿ ಕಡೆಗೆ ಹೋಗುತ್ತಿದ್ದವು. ಈ ಮಾರ್ಗದ ಬಸ್‌ಗಳು ಕೂಡ ನಿಪ್ಪಾಣಿವರೆಗೆ ಚಲಿಸಿ ಮರಳಿದವು.

Comments are closed.