ಕರ್ನಾಟಕ

‘ಅದಷ್ಟು ಬೇಗ ಜನ ನಿಮಗೆ ನನ್ನ ವಿಳಾಸ ತೋರಿಸುತ್ತಾರೆ’ ! ಯಡಿಯೂರಪ್ಪಗೆ ಕುಮಾರಸ್ವಾಮಿ ಟಾಂಗ್

Pinterest LinkedIn Tumblr


ಬೆಂಗಳೂರು: ಅತೀ ಶೀಘ್ರದಲ್ಲೇ ಜನ ನಿಮಗೆ ನನ್ನ ಅಡ್ರೆಸ್ ತೋರಿಸುತ್ತಾರೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಎಚ್‌. ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ತಿವಿದಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಬಿಎಸ್‌ವೈ ಅವರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ ಹಿಂದೆ ಅಡ್ರೆಸ್ ಹುಡುಕಿಕೊಂಡು ಬಂದಿದ್ದನ್ನು ನೆನಪಿಸಿಕೊಳ್ಳಿ ಎಂದರು.

ಮಂಗಳೂರು ಗೋಲಿಬಾರ್ ವಿಚಾರವಾಗಿ ರಾಜ್ಯ ಸರಕಾರ ಹಾಗೂ ಬಿಎಸ್‌ ಯಡಿಯೂರಪ್ಪ ಅವರು ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್‌ವೈ ‘ಮೂರೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ. ಸದ್ಯದ ಮಟ್ಟಿಗೆ ಕುಮಾರಸ್ವಾಮಿ ಅವರಿಗೆ ಅಡ್ರೆಸ್‌ ಇಲ್ಲದಂತಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ಅಡ್ರೆಸ್‌ ಬಗ್ಗೆ ನೀವು ಮಾತನಾಡಿದ್ದೀರಿ. ನನ್ನ ಅಡ್ರೆಸ್‌ ತೋರಿಸುವುದು ಈ ನೆಲ, ಈ ಜನ. ಅತೀ ಶೀಘ್ರದಲ್ಲೇ ಜನ ನಿಮಗೆ ನನ್ನ ಅಡ್ರೆಸ್‌ ತೋರಿಸುತ್ತಾರೆ. ಅಷ್ಟಕ್ಕೂ 2006ರಲ್ಲಿ ಒಂದು ಸಚಿವ ಸ್ಥಾನಕ್ಕಾಗಿ ನನ್ನ ‘ಅಡ್ರೆಸ್‌‘ ಹುಡುಕಿಕೊಂಡು ಬಂದವರು ನೀವೇ ಅಲ್ಲವೇ? ನೆನಪಿಲ್ಲದಿದ್ದರೆ ಒಂದು ಬಾರಿ ನೆನಪಿಸಿಕೊಳ್ಳಿ ಎಂದಿದ್ದಾರೆ.

“ಶತಮಾನಗಳ ಕಾಲ ಭಾರತವನ್ನು ದಾಸ್ಯದಲ್ಲಿಟ್ಟುಕೊಂಡ ಬ್ರಿಟಿಷರ ಅಂಕುಶವಿಲ್ಲದಂತಿದ್ದ ಸಾಮ್ರಾಜ್ಯವನ್ನೇ ಈ ನೆಲದ ಜನ ಕೊನೆಗಾಣಿಸಿದ್ದಾರೆ. ಇನ್ನು ನಿಮ್ಮ ಮೂರು ವರ್ಷ ಯಾವ ಲೆಕ್ಕ?” ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ಲದೆ, ಅಧಿಕಾರದ ಮದದಲ್ಲಿ ಆಣೆಗಳನ್ನಿಟ್ಟವರನ್ನೇ ನಮ್ಮ ಜನ ಬಿಟ್ಟಿಲ್ಲ. ಅವರಿಗೆ ನನ್ನ ಅಡ್ರೆಸ್‌ ತೋರಿಸಿದ್ದಾರೆ. ಇನ್ನು ನೀವು ಅಡ್ರೆಸ್‌ ಕೇಳಿದಾಗ್ಯೂ ಜನ ನನ್ನ ಅಡ್ರೆಸ್‌ ತೋರಿಸದೇ ಬಿಟ್ಟಾರೆಯೇ? ಎಚ್ಚರದಿಂದಿರಿ ಎಂದು ಕಿಡಿಕಾರಿದ್ದಾರೆ.

ಅಧಿಕಾರದ ಅಮಲು ನಿಮ್ಮ ಮೂಲಕ ಏನೇನನ್ನೋ ಹೇಳಿಸುತ್ತಿದೆ. ಅಂಕುಶವಿಲ್ಲದಂತಿದ್ದ ಬಿಳಿಯರ ಸಾಮ್ರಾಜ್ಯವನ್ನೇ ಈ ಜನ ಅಂತ್ಯಗೊಳಿಸಿದ್ದಾರೆ. ಸಣ್ಣ ಪ್ರಾಂತ್ಯವನ್ನು ಮುನ್ನಡೆಸಿದರೂ, ಉತ್ತಮ ಆಡಳಿತ ನೀಡಿದ ಕೆಂಪೇಗೌಡರ ಪ್ರಾಂತ್ಯವೂ ಇದೇ ನೆಲದಲ್ಲೇ ಅಳಿದಿದೆ. ಆದರೆ, ಇಲ್ಲಿ ಉಳಿದಿದ್ದು ಹೆಸರು. ನಿಮ್ಮ–ನಮ್ಮ ವಿಚಾರದಲ್ಲೂ ಇದು ಅನ್ವಯ ಎಂದು ಟ್ವೀಟ್‌ ಮೂಲಕ ಬಿಎಸ್‌ ಯಡಿಯೂರಪ್ಪನವರ ವಿರುದ್ಧ ದಾಳಿ ನಡೆಸಿದ್ದಾರೆ.

Comments are closed.