ಕರ್ನಾಟಕ

ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯ

Pinterest LinkedIn Tumblr

ನರೇಂದ್ರ ಮೋದಿ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. 2021 ಜನವರಿ 15ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ (ಬಿಐಎಸ್) ಹಾಲ್‌ಮಾರ್ಕ್‌ ಕಡ್ಡಾಯವಾಗಲಿದೆ.

ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ 2021 ಜನವರಿ 15ರಿಂದ ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಲಿದ್ದು, 2020 ಜನವರಿ 15ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಒಂದು ವರ್ಷದ ಬಳಿಕ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಚಿನ್ನಾಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರತೀಯ ಮಾನದಂಡ ಅಡಿಯಲ್ಲಿ (ಬಿಐಎಎಸ್) ನೋಂದಾಯಿಸಿಕೊಳ್ಳಬೇಕು. ಹಾಲ್‌ಮಾರ್ಕ್ ಇರುವ ಚಿನ್ನವನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಈ ಅಧಿಸೂಚನೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು, ಮೆಟ್ರೋ ನಗರಗಳಿಂದ ಪ್ರಾರಂಭಿಸಿ ನಾಲ್ಕು ಹಂತಗಳಲ್ಲಿ ಚಿನ್ನದ ಹಾಲ್‌ಮಾರ್ಕ್ ಅನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ. ಹಾಲ್‌ಮಾರ್ಕ್ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಕನಿಷ್ಠ 1 ಲಕ್ಷ ರುಪಾಯಿಗಳಿಂದ ಗರಿಷ್ಠ ಚಿನ್ನದ ಮೌಲ್ಯದ 5 ಪಟ್ಟು ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಬಿಐಎಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2016ರ ಬಿಐಎಸ್ ಕಾಯ್ದೆ ಪ್ರಕಾರ ಆಭರಣಕಾರರು 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂಬ ಮೂರು ಅಳತೆಗಳ ಅಡಿಯಲ್ಲಿ ಚಿನ್ನವನ್ನು ಗುರುತಿಸಬೇಕಾಗಿದೆ. ಕ್ಯಾರೆಟ್ ಎನ್ನುವುದು ಚಿನ್ನದ ಪ್ರಮಾಣವನ್ನು 24 ಭಾಗಗಳಲ್ಲಿ ಮಿಶ್ರಲೋಹದಲ್ಲಿ ಸೂಚಿಸುವ ಅಳತೆಯಾಗಿದೆ. ಆದ್ದರಿಂದ 18 ಕ್ಯಾರೆಟ್ ಚಿನ್ನವು 18/24 ಭಾಗಗಳ ಚಿನ್ನವಾಗಿದೆ.

ಪ್ರಸ್ತುತ ದೇಶಾದ್ಯಂತ ಕೇವಲ 26,019 ಆಭರಣ ವ್ಯಾಪಾರಿಗಳು ಬಿಎಸ್‌ಐನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸದ್ಯ ಬಳಕೆಯಲ್ಲಿರುವ ಚಿನ್ನಾಭರಣಗಳಲ್ಲಿ ಶೇಕಡಾ 40ರಷ್ಟು ಹಾಲ್‌ಮಾರ್ಕ್ ಒಳಗೊಂಡಿವೆ.

Comments are closed.