ಕರ್ನಾಟಕ

ಸರ್ಕಾರದ ಸಾಮೂಹಿಕ ವಿವಾಹಕ್ಕೆ ಷರತ್ತುಗಳು ಅನ್ವಯ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಹಿಂದೂಗಳ ಸಾಮೂಹಿಕ ವಿವಾಹ ಯೋಜನೆಯನ್ನು ಪ್ರಕಟಿಸಿದೆ.

ಸರ್ಕಾರದ ಹೊಸ ಯೋಜನೆ ಕುರಿತು ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಮುಂದಿನ ವರ್ಷದಿಂದ ಸಾಮೂಹಿಕ‌ ಮದುವೆಗಳನ್ನು ಸರ್ಕಾರದಿಂದ ಮಾಡಲು ನಿರ್ಧರಿಸಿದ್ದೇವೆ ಎಂದರು.

“ಎ” ದರ್ಜೆಯ 90 ರಿಂದ 100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನೆರವೇರಲಿದೆ. ಮೊದಲ ಸಾಮೂಹಿಕ ಮದುವೆ ಏಪ್ರಿಲ್ 26 ಮತ್ತು ಎರಡನೇ ಸಾಮೂಹಿಕ ಮದುವೆ ಮೇ 24 ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ವಧುವಿನ ತಾಳಿಗಾಗಿ ₹40 ಸಾವಿರ, ಧಾರೆ ಸೀರೆ ಖರೀದಿಸಲು ₹10 ಸಾವಿರ ಹಾಗೂ ವರನಿಗೆ ಪಂಚೆ, ಧೋತಿ ಖರೀದಿಗೆ ₹5 ಸಾವಿರ ನೀಡಲಾಗುವುದು. ಆಯಾ ಜಿಲ್ಲಾಧಿಕಾರಿಗಳು ಒಂದು ತಿಂಗಳ ಮೊದಲಾಗಿ ವರ ಮತ್ತು ವಧುವಿನ ಖಾತೆಗಳಿಗೆ ಈ ಮೊತ್ತ ಜಮಾ ಮಾಡಲಿದ್ದಾರೆ ಎಂದರು.

ಈ ವರ್ಷ 1 ಸಾವಿರ ವಿವಾಹ ನಡೆಯುವ ನಿರೀಕ್ಷೆ ಇದೆ. ಮುಜರಾಯಿ ದೇವಾಲಯಗಳಿಗೆ ಬರುವ ಆದಾಯದಿಂದಲೇ ಈ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಮತ್ತು ಮುಜರಾಯಿ ದೇವಾಲಯಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲಾಗಿದೆ ಎಂದರು.

ಆರ್ಥಿಕವಾಗಿ ಸಧೃಡವಾಗಿರುವ ಆಯ್ದ 100 ‘ಎ’ದರ್ಜೆ ದೇಗುಲಗಳಲ್ಲಿ ಸರ್ಕಾರದಿಂದ ಪ್ರತೀ ವರ್ಷ 10 ಸಾವಿರಕ್ಕೂ ಅಧಿಕ ಉಚಿತ ಸಾಮೂಹಿಕ ವಿವಾಹ ಆಯೋಜಿಸಲು ರಾಜ್ಯ ಧಾರ್ಮಿಕ ಪರಿಷತ್ ತೀರ್ಮಾನಿಸಿದೆ.

ಆರ್ಥಿಕವಾಗಿ ಸದೃಢವಾಗಿರುವ ದೇವಾಲಯಗಳು ವರ್ಷಕ್ಕೊಮ್ಮೆ 100 ಜೋಡಿಗಳಿಗೆ ವಿವಾಹ ನೆರವೇರಿಸಿದರೂ 100 ದೇಗುಲಗಳಿಂದ ವಾರ್ಷಿಕ 10,000 ಜೋಡಿ ವಿವಾಹ ನೆರವೇರಿಸಬಹುದಾಗಿದೆ. ಆ ಮೂಲಕ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವುದು, ಆರ್ಥಿಕವಾಗಿ ಬಡ ಕುಟುಂಬಗಳ ಮೇಲೆ ಬೀಳಬಹುದಾದ ಸಾಲದ ಹೊರೆ ತಪ್ಪಿಸುವುದು ಸರ್ಕಾರದ ಮಹದುದ್ದೇಶವಾಗಿದೆ ಎಂದು ಸಚಿವರು ತಮ್ಮ ಆಶಯವನ್ನು ಬಿಚ್ಚಿಟ್ಟರು.

ಷರತ್ತುಗಳು ಏನು?
30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಪೋಷಕರು ವಧು-ವರರ ದಾಖಲೆಯನ್ನು ನೀಡಬೇಕಾಗುತ್ತದೆ. ಪರೋಕ್ಷವಾಗಿ ಪ್ರೀತಿಸಿ ಮದುವೆ ಆಗುವ ಮಂದಿಗೆ ಅವಕಾಶವಿಲ್ಲ. ಎರಡನೇ ಮದುವೆಗೆ ಅವಕಾಶ ಇಲ್ಲ. ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಲೇಬೇಕು. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.

Comments are closed.