ಕರ್ನಾಟಕ

ದಾವಣಗೆರೆ ಜಿಲ್ಲಾಸ್ಪತ್ರೆ ಜನಿಸಿದ್ದು ಗಂಡು, ಕೊಟ್ಟಿದ್ದು ಹೆಣ್ಣುಮಗು

Pinterest LinkedIn Tumblr


ದಾವಣಗೆರೆ: ನಗರದ ಜಿಲ್ಲಾಸ್ಪತ್ರೆಯ ಎಡವಟ್ಟು ಒಂದಲ್ಲ ಎರಡಲ್ಲ, ಆದರೆ ಈ ಬಾರಿ ಮಾತ್ರ ಸಿಬ್ಬಂದಿ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಪೋಷಕರಿಗೆ ಅದಲು ಬದಲು ಮಾಡಿರುವ ಆರೋಪವೊಂದು ಕೇಳಿಬಂದಿದೆ.

ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಅವರಿಗೆ ಇದೇ ತಿಂಗಳು 8ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಧ್ಯರಾತ್ರಿ 12:30ರ ಸುಮಾರಿಗೆ ಹೆಣ್ಣು ಮಗು ಜನಿಸಿತ್ತು. ಕೆಲವು ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಮನೆಗೆ ಭೇಟಿ ನೀಡಿ ಆಶಾ ಕಾರ್ಯಕರ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ, ನಿಮ್ಮ ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ.

ಈ ವೇಳೆ ಮಗುವಿನ ತಾಯಿ ಮಲ್ಲೇಶ್ವರಿ ಅವರು ನಮ್ಮದು ಹೆಣ್ಣು ಮಗು ಎಂದು ಹೇಳಿದಾಗ, ದಾದಿ ತಮ್ಮಲ್ಲಿದ್ದ ದಾಖಲೆ ತೋರಿಸಿ ನೋಡಿ ಇದರಲ್ಲಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿದೆ ಎಂದು ದಾಖಲಾಗಿದೆ ಎಂದಿದ್ದಾರೆ.

ಮಗುವಿನೊಂದಿಗೆ ಆಟವಾಡಿಕೊಂಡಿದ್ದ ತಾಯಿಯ ಮನಸ್ಸು ಕದಡಿದ್ದು, ಗಂಡು ಮಗುವಾಗಿದ್ದರು ಕೂಡ ಹೆಣ್ಣು ಮಗುವನ್ನು ನೀಡಿದ್ದಾರಾ? ಆಸ್ಪತ್ರೆಯಲ್ಲೆನಾದರು ಬದಲಾಯಿಸಿದರಾ? ಎಂಬ ಅನುಮಾನ ಕಾಡ ತೊಡಗಿತು. ಇದರಿಂದ ಮಗುವಿನ ತಂದೆ, ಅಜ್ಜ ಹಾಗೂ ಸೋದರ ಮಾವ ಸೇರಿದಂತೆ ಸಂಬಂಧಿಗಳು ಜಿಲ್ಲಾಸ್ಪತ್ರೆಗೆ ಆಗಮಿಸಿ, ಮಗುವನ್ನು ಅದಲುಬದಲು ಮಾಡಿದ್ದೀರಾ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯ ದಾಖಲೆಗಳಲ್ಲಿ ಮಾತ್ರ ಗಂಡು ಮಗು ಎಂದಿದ್ದು, ಪೋಷಕರಿಗೆ ಕೊಟ್ಟಿದ್ದು ಮಾತ್ರ ಹೆಣ್ಣು ಮಗುವಾಗಿದೆ. ಇದರಿಂದ ಪೋಷಕರು ಮಗುವಿನ ಡಿಎನ್‍ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯರು ಮಾತ್ರ ಯಾವ ತನಿಖೆಗಾದರೂ ಸಿದ್ಧವಿದ್ದೇವೆ. ಡಿಎನ್‍ಎ ಪರೀಕ್ಷೆಗೆ ಪೋಷಕರು ಒಪ್ಪಿಕೊಂಡರೆ ಮಾಡಿಸಲು ಸಿದ್ಧ ಎಂದಿದ್ದಾರೆ.

Comments are closed.