ಕರ್ನಾಟಕ

ಈ ಜಿಲ್ಲೆಯಲ್ಲಿ ‘ಪಟಾಕಿಮುಕ್ತ ದೀಪಾವಳಿ’ ಆಚರಣೆ

Pinterest LinkedIn Tumblr


ಮಡಿಕೇರಿ: ಬೆಳಕಿನ ಹಬ್ಬ ದೀಪಾವಳಿ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಮಾಲಿನ್ಯ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಆಂದೋಲನದ ಪರಿಣಾಮವಾಗಿ ‘ಪಟಾಕಿಮುಕ್ತ ದೀಪಾವಳಿ’ ಆಚರಣೆಯನ್ನು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಆಚರಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರುಪಡೆ ಪರಿಸರ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಇಕೋ ಕ್ಲಬ್‌ಗಳ ಆಶ್ರಯದಲ್ಲಿ ಕಳೆದ ಒಂದು ವಾರ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನ ನಡೆಸಲಾಯಿತು. ಇದರ ಪರಿಣಾಮ ಜಿಲ್ಲೆಯಲ್ಲಿ ಪಟಾಕಿ ವ್ಯಾಪಾರ ಕೂಡ ಈ ಬಾರಿ ಕ್ಷೀಣಿಸಿರುವುದು ಕಂಡುಬಂದಿದೆ ಎಂದು ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.

ಈ ಜಾಗೃತಿ ಆಂದೋಲನದಲ್ಲಿ ಪಟಾಕಿಮುಕ್ತ ದೀಪಾವಳಿ ಆಚರಣೆ ಕುರಿತಂತೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿ ನೀಡುವ ಮೂಲಕ ಹಸಿರು ದೀಪಾವಳಿ ಆಚರಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವಿದ್ಯಾರ್ಥಿಗಳು ಹೆಚ್ಚಾಗಿ ಪಟಾಕಿ ತ್ಯಜಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಈ ಪರಿಸರ ಜಾಗೃತಿಯನ್ನು 7 ವರ್ಷಗಳಿಂದ ಆಂದೋಲನ ರೂಪದಲ್ಲಿ ಸಂಘಟಿಸಿಕೊಂಡು ಬರಲಾಗಿದೆ. ಇದರಿಂದ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತ ಮತ್ತು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡು ಭವಿಷ್ಯದಲ್ಲಿ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

Comments are closed.