ಕರ್ನಾಟಕ

ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ಆಲಂಬಾಡಿ ಕಾವಲ್ ನಲ್ಲಿ ಪಿಎಫ್ಐ ಸಂಘಟನೆಯ ಪೆರೇಡ್; 16 ಮಂದಿ ಬಂಧನ

Pinterest LinkedIn Tumblr


ಮಂಡ್ಯ(ಅ. 27): ರಾಜ್ಯದಲ್ಲಿ ಉಗ್ರರ ಜಾಲ ವಿಸ್ತರಣೆಯಾಗುತ್ತಿದೆ ಎಂದು ಗುಪ್ತಚರ ಇಲಾಖೆ ಅನೇಕ ಬಾರಿ ಎಚ್ಚರಿಕೆ ಕೊಟ್ಟಿದೆ. ಇದಕ್ಕೆ ಇಂಬು ಕೊಡುವಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ಆಲಂಬಾಡಿ ಕಾವಲ್ ಎಂಬಲ್ಲಿ ಪಿಎಫ್​ಐ ಸಂಘಟನೆಯು ಇಂದು ಪೆರೇಡ್ ನಡೆಸಿದೆ. ಮಂಡ್ಯ ಪೊಲೀಸರು ಕಾರ್ಯಾಚರಣೆ ನಡೆಸಿ 16 ಮಂದಿ ಶಂಕಿತ ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಹುಣಸೂರಿನ 3, ಆಲಂಬಾಡಿ ಕಾವಲ್​ನ 5, ಕೆಆರ್ ಪೇಟೆಯ 8 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ಕೆಆರ್ ಪೇಟೆಯ ಶಫೀವುಲ್ಲಾ ಕೂಡ ಸೇರಿದ್ದಾರೆ. ಶಫೀವುಲ್ಲಾ ಕಿಕ್ಕೇರಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದು ಆತ ಪಿಎಫ್​ಐ ಸಂಘಟನೆಯ ಕಾರ್ಯಕರ್ತನೆಂದು ಶಂಕಿಸಲಾಗಿದೆ.

ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಉಪ ವರಿಷ್ಠಾಧಿಕಾರಿ ಡಾ| ವಿ.ಜೆ. ಶೋಭಾರಾಣಿ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಸಂಶಯದ ಮೇಲೆ 16 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದೇವೆ. ಇವರ ಮೇಲೆ ಸಂಶಯ ಮೂಡುವಂಥ ಮಾಹಿತಿ ಬಂದಿಲ್ಲ ಎಂದು ಎಸ್​ಪಿ ಪರಶುರಾಮ್ ಅವರು ನ್ಯೂಸ್18 ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.

2006ರಲ್ಲಿ ಪ್ರಾರಂಭವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮೇಲೆ ಉಗ್ರ ಚುಟುವಟಿಕೆಗಳಲ್ಲಿ ಶಾಮೀಲಾಗಿರುವ ಆರೋಪವಿದೆ. ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುವುದಾಗಿ ಹೇಳಿಕೊಳ್ಳುವ ಪಿಎಫ್​ಐ ನಿಷೇಧಿತ ಸಿಮಿ ಸಂಘಟನೆಯ ಇನ್ನೊಂದು ರೂಪ ಎಂಬ ಮಾತೂ ಇದೆ. ಹಲವು ಕಡೆದ ಉಗ್ರ ದಾಳಿಗಳಲ್ಲಿ ಪಿಎಫ್​ಐ ಸಂಘಟನೆಯ ಕೈವಾಡ ಇದೆ ಎಂಬ ಶಂಕೆ ಇದೆ. ಕೇರಳದಲ್ಲಿ ಕೆಲ ಆರೆಸ್ಸೆಸ್ ಮತ್ತು ಕಮ್ಯೂನಿಸ್ಟ್ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆ ಮಾಡಿದ ಪ್ರಕರಣಗಳಲ್ಲಿ ಪಿಎಫ್​ಐ ಕೈವಾಡ ಇರುವುದು ತಿಳಿದುಬಂದಿದೆ. ಕೇರಳ ಸರ್ಕಾರವು ಪಿಎಫ್​​ಐ ಸಂಘಟನೆಯನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರ ಕೂಡ ನಿಷೇಧದ ಚಿಂತನೆಯಲ್ಲಿದೆ.

Comments are closed.