ಅಂತರಾಷ್ಟ್ರೀಯ

ಮೋದಿಗೆ ಪಾಕ್ ಮೂಲಕ ವಾಯು ಮಾರ್ಗದಲ್ಲಿ ಹೋಗಲು ನಿರಾಕರಣೆ

Pinterest LinkedIn Tumblr


ಇಸ್ಲಾಮಾಬಾದ್(ಅ. 27): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ವಾಯು ಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ತಾನ ಮತ್ತೊಮ್ಮೆ ಅವಕಾಶ ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಕಾಶ್ಮೀರಿಗಳು ಇವತ್ತು ಕಪ್ಪು ದಿನ ಆಚರಿಸುತ್ತಿದ್ಧಾರೆ ಎಂಬ ಕಾರಣವೊಡ್ಡಿ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾಗೆ ಹೋಗಲು ಪಾಕಿಸ್ತಾನದ ವಾಯು ಮಾರ್ಗದ ಬಳಕೆಗಾಗಿ ಅನುಮತಿ ಕೋರಿದ್ದರೆನ್ನಲಾಗುತ್ತಿದೆ.

“ನಮ್ಮ ವಾಯು ಪ್ರದೇಶವನ್ನು ಬಳಸಿಕೊಳ್ಳಲು ಭಾರತದ ಪ್ರಧಾನಿ ಮನವಿ ಮಾಡಿದ್ದರು. ಆದರೆ, ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮತ್ತು ಭಾರತದ ಆಕ್ರಮಣವನ್ನು ಖಂಡಿಸಿ ಇವತ್ತು ಕಾಶ್ಮೀರಿಗಳು ಕಪ್ಪು ದಿನ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಭಾರತದ ಪ್ರಧಾನಿ ಅವರಿಗೆ ಅನುಮತಿ ನಿರಾಕರಿಸಿದ್ದೇವೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ನಿನ್ನೆ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಭಾರತೀಯ ನಾಯಕರಿಗೆ ತನ್ನ ವಾಯು ಪ್ರದೇಶ ಬಳಸಿಕೊಳ್ಳುವ ಅವಕಾಶ ನಿರಾಕರಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಕಳೆದ ತಿಂಗಳಷ್ಟೇ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.

ಇದೇ ಫೆಬ್ರವರಿ ತಿಂಗಳಲ್ಲಿ ಭಾರತವು ಬಾಲಾಕೋಟ್​ನಲ್ಲಿನ ಉಗ್ರರ ಅಡಗುದಾಣದ​ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಕೆಲ ದಿನಗಳ ಕಾಲ ಮುಚ್ಚಿತ್ತು. ಮಾರ್ಚ್ 27ರ ನಂತರ ಭಾರತ ಹಾಗೂ ಇತರ ದೇಶಗಳಿಗೆ ಹೋಗುವ ವಿಮಾನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಮಾನ ಸಂಚಾರಕ್ಕೆ ಪಾಕಿಸ್ತಾನ ತನ್ನ ಮಾರ್ಗವನ್ನು ತೆರೆದಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ಭಾರತ ಹಿಂಪಡೆದ ನಂತರ ಎರಡೂ ದೇಶಗಳ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಭಾರತದೊಂದಿಗಿನ ಎಲ್ಲಾ ರೀತಿಯ ವ್ಯವಹಾರವನ್ನು ನಿಲ್ಲಿಸಿದೆ. ರೈಲು, ರಸ್ತೆ ಸಂಚಾರ ಮಾರ್ಗವನ್ನು ಸ್ಥಗಿತಗೊಳಿಸಿದೆ.

Comments are closed.