ಕರ್ನಾಟಕ

ಉತ್ತರ ಕರ್ನಾಟಕಕ್ಕೆ ಮತ್ತೆ ನೆರೆ: ವರುಣನ ಅಬ್ಬರಕ್ಕೆ ನಿಂತ ಜಾಗದಿಂದ ಕೊಚ್ಚಿ ಹೋಗಿ ಮೋರಿಗೆ ಬಿದ್ದ ಕಾರು

Pinterest LinkedIn Tumblr


ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಮತ್ತೆ ವರುಣಾಘಾತವಾಗಿದೆ. ಗಾಯದ ಮೇಲೆ ಬರೆ ಎಂಬಂತೆ ಈಗಷ್ಟೇ ನೆರೆ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಉತ್ತರ ಕರ್ನಾಟಕದ ಜನರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಮತ್ತೊಂದ್ಕಡೆ ಮಡಿಕೇರಿ ಸಂತ್ರಸ್ತರಿಗೆ ಸರ್ಕಾರ ಶಾಕ್ ಕೊಟ್ಟಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದಲ್ಲಿ ಹಳ್ಳದ ನೀರು ಅವಾಂತರ ಸೃಷ್ಟಿಸಿದೆ. ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಮನೆಗಳ ಮೊದಲ ಮಹಡಿ ದಾಟಿದೆ. ನೀರಿನ ರಭಸಕ್ಕೆ ನಿಂತ ಜಾಗದಿಂದ ಕಾರು ಮತ್ತು ವಾಹನಗಳು ಕೊಚ್ಚಿ ಹೋಗಿ ಮೋರಿಗೆ ಬಿದ್ದಿವೆ. ಗ್ರಾಮಸ್ಥರು ತಮ್ಮ ಮನೆಯ ಮಹಡಿ ಮೇಲೆ ನಿಂತು ಮೂಕ ಪ್ರೇಕ್ಷರಂತೆ ಹಳ್ಳದ ನೀರಿನ ಹರಿವು ವೀಕ್ಷಿಸುತ್ತಿದ್ದಾರೆ. ಈಗಾಗಲೇ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯ ನೆರೆಯಿಂದ ಜನರು ತತ್ತರಿಸಿದ್ದಾರೆ. ಈ ಬೆನ್ನಲ್ಲೇ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನರು ಹೈರಾಣ ಆಗಿದ್ದಾರೆ.

ಧಾರವಾಡದಲ್ಲಿ ಧಾರಾಕಾರ ಮಳೆಗೆ ನಗರದ ಟೋಲನಾಕಾ ರಸ್ತೆ ಜಲಾವೃತಗೊಂಡು ರಸ್ತೆ ಸಂಚಾರಕ್ಕೆ ಅಡ್ಡಿಯಾದರೆ, ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ಪ್ರವಾಹಕ್ಕೆ ಕಾಲವಾಡ ಗ್ರಾಮಕ್ಕೆ ನುಗ್ಗಿದ ಕಾರಣ ಗ್ರಾಮದಲ್ಲಿ ಬೆಣ್ಣಿಹಳ್ಳದ ನೀರು ಆವರಿಸಿಕೊಂಡಿತ್ತು. ಹಳ್ಳದ ರಭಸಕ್ಕೆ ಜಿಲ್ಲೆಯ ಅಳ್ನಾವರ-ಕಾಶೆನಟ್ಟಿ ಮಧ್ಯದ ರಸ್ತೆ ಕೊಚ್ಷಿ ಹೋಗಿ ಸಂಪರ್ಕ ಕಡಿತಗೊಂಡಿತು. ಅಷ್ಟೇ ಅಲ್ಲದೆ ಧಾರವಾಡದಲ್ಲಿ ಮಳೆ ನಿಲ್ಲದ ಕಾರಣ ನಗರದ ಜನ್ನತನಗರದಲ್ಲಿ ಹಳ್ಳದಂತೆ ನೀರು ಹರಿದರೆ, ಸಿಬಿನಗರದಲ್ಲಿ ನೀರಿನಿಂದ ಕೆರೆಯೇ ನಿರ್ಮಾಣವಾಗಿತ್ತು. ಲಕ್ಷ್ಮಿಸಿಂಗನಕೆರೆ, ಗುಲಗಂಜಿಕೊಪ್ಪ, ಕೊಪ್ಪದಕೆರೆ, ರಾಜೀವಗಾಂಧಿನಗರದ, ಕಂಠಿಗಲ್ಲಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಮಡಿಕೇರಿಯಲ್ಲಿ ಮತ್ತೆ ಮಳೆಯಾಗುತ್ತಿದ್ದು, ಭಾನುವಾರದಿಂದ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಕುಕ್ಕಾವಿನಲ್ಲಿ ಜೀಪು ಚಾಲಕನೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ತುಂಬಿಹರಿಯುತ್ತಿದ್ದ ನೀರಿನಲ್ಲಿ ಜೀಪು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕೊನೆಗೆ ಸ್ಥಳೀಯರು ಹರಸಾಹಸಪಟ್ಟು ಹಗ್ಗದಿಂದ ಜೀಪ್ ಮೇಲಕ್ಕೆತ್ತಿದ್ದಾರೆ.

ವಿಜಯಪುರದಲ್ಲಿ ಶನಿವಾರವಷ್ಟೇ ದ್ಯಾಬೇರಿ-ಜಂಬಗಿ ಸೇತುವೆಯಲ್ಲಿ ಬೈಕ್ ಸವಾರ ಹೊಳೆ ನೀರಿನಲ್ಲಿ ಕೊಚ್ಚಿಹೋಗಿ ಈಜಿ ಬಂದು ಸೇಫ್ ಆಗಿದ್ದರು. ಇವತ್ತು ಅದೇ ಸೇತುವೆ ಮೇಲೆ ಯುವಕ ತನ್ನ ಬೈಕ್‍ನಲ್ಲಿ ಹೋಗಿ ತಗ್ಲಾಕೊಂಡು ಬೈಕ್ ಕಳೆದುಕೊಂಡಿದ್ದಾನೆ. ಅಧಿಕಾರಿಗಳು ಎಚ್ಚರಿಕೆ ನೀಡಿದರು ಹರಿಯುವ ನೀರಿನಲ್ಲಿ ಸಂಚರಿಸಿದ್ದಾನೆ.

ಗದಗ, ಹಾವೇರಿ, ಕೊಲಾರದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮನೆ, ಹೊಲ ಗದ್ದೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಗದಗನ ಗಂಗಿಮಡಿ ಬಡವಾಣೆಗೆ ಜಲ ದಿಗ್ಭಂಧನವಾಗಿದೆ. ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆಯಿದ್ದು, ಉತ್ತರ ಕರ್ನಾಟಕ ಮಂದಿ ಆತಂಕಕ್ಕೀಡಾಗಿದ್ದಾರೆ. ಮತ್ತೆ ಎಲ್ಲಿ ಮುಳುಗುಹೋಗುತ್ತೇವೋ ಎನ್ನುವ ಭಯದಲ್ಲಿದ್ದಾರೆ.

Comments are closed.