ಮನೋರಂಜನೆ

ಮೋದಿ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ ಸೊಸೆ ಅಸಮಾಧಾನ

Pinterest LinkedIn Tumblr


ಹೈದರಾಬಾದ್: ಪ್ರಧಾನಿ ಮೋದಿ ಅವರು ಮಹಾತ್ಮಾ ಗಾಂಧೀಜಿ ಅವರ ಆದರ್ಶಗಳನ್ನು ಚಲನಚಿತ್ರೋದ್ಯಮದ ಮೂಲಕ ಜನಪ್ರಿಯಗೊಳಿಸಲು ಬಾಲಿವುಡ್ ನಟ-ನಟಿಯರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ. ಆದರೆ ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ, ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಇದರಿಂದ ಬೇಸರಗೊಂಡಿದ್ದು, ಮೋದಿ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಉಪಾಸನಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರೀತಿಯ ನರೇಂದ್ರ ಮೋದಿಜೀ ನಾವು ದಕ್ಷಿಣ ಭಾರತದವರು. ನಿಮ್ಮನ್ನು ನಾವು ಪ್ರಧಾನಿಯನ್ನಾಗಿ ಪಡೆದಿದ್ದಕ್ಕಾಗಿ ಹೆಮ್ಮೆ ಪಡುತ್ತೇವೆ. ಪ್ರಮುಖ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು ಬರೀ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವೇ. ದಕ್ಷಿಣ ಭಾರತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ನನ್ನ ಭಾವನೆಗಳನ್ನು ಮಾತ್ರ ನೋವಿನಿಂದ ವ್ಯಕಪಡಿಸುತ್ತಿದ್ದೇನೆ. ಹೀಗಾಗಿ ನೀವು ನನ್ನ ಅಭಿಪ್ರಾಯವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಿದ್ದೀರಿ ಎಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಗಾಂಧೀಜಿ ಅವರ 150ನೇ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲೇ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಮೀರ್, ಶಾರೂಖ್, ರಾಜ್‍ಕುಮಾರ್ ಹಿರಾನಿ, ಕಂಗನಾ ರನೌತ್, ಆನಂದ್ ಎಲ್ ರೈ, ಎಸ್‍ಪಿ ಬಾಲಸುಬ್ರಹ್ಮಣ್ಯಂ, ಸೋನಮ್ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂಬಂಧಿಸಿದ ನಾಲ್ಕು ಸಾಂಸ್ಕೃತಿಕ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಚಿತ್ರೋದ್ಯಮದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಜನಪ್ರಿಯಗೊಳಿಸುವ ವಿಷಯದಲ್ಲಿ ಮನರಂಜನಾ ಉದ್ಯಮದಲ್ಲಿ ಹಲವಾರು ಜನರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Comments are closed.