ಕರ್ನಾಟಕ

ವಾಣಿಜ್ಯ ಕಟ್ಟಡ, ಉದ್ದಿಮೆ,ಅಂಗಡಿಗಳಿಗೆ ಕನ್ನಡ ಭಾಷೆಯ ನಾಮಫಲಕ ಹೊಂದಿಲ್ಲದಿದ್ದರೆ ಪರವಾನಗೆ ರದ್ದು

Pinterest LinkedIn Tumblr

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಳಕೆಗೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. ಕನ್ನಡ ಭಾಷೆಯಲ್ಲಿ ನಾಮಫಲಕ ಹೊಂದಿಲ್ಲದ ಉದ್ದಿಮೆಗಳು, ಅಂಗಡಿ ಮುಂತಾದ ವಾಣಿಜ್ಯ ಕಟ್ಟಡಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಸಕ್ತ ನವೆಂಬರ್ 1ರಿಂದ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಕಂಪೆನಿಗಳು ಹಾಗೂ ಇತರೆ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ಶಾಖೆ ಅಥವಾ ಕಟ್ಟಡ ಮುಂದೆ ಅಳವಡಿಸಿರುವ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಬಳಸಬೇಕು ಎಂದು ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಶನಿವಾರ ಆದೇಶ ಹೊರಡಿಸಿದ್ದಾರೆ.

ನಾಮಫಲಕಗಳಲ್ಲಿ ಕನಿಷ್ಠ ಶೇ 60ರಷ್ಟು ಕನ್ನಡ ಭಾಷೆಯಲ್ಲಿ ವಿವರ ಇರಬೇಕು. ಕನ್ನಡ ಭಾಷೆಯ ಬಳಕೆಯು ಸ್ಪಷ್ಟವಾಗಿ ಇರುವಂತೆ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಆದೇಶವನ್ನು ಕಡೆಗಣಿಸಿ ಕನ್ನಡವನ್ನು ಆದ್ಯತೆಯ ಮೇರೆಗೆ ಬಳಸದೆ ಇದ್ದರೆ ಅದರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

ಈ ಹಿಂದೆಯೇ ಪರವಾನಗಿ ಪಡೆದಿರುವವರು 2019ರ ನವೆಂಬರ್ 1ರ ಒಳಗೆ ಈ ಆದೇಶಕ್ಕೆ ಅನುಗುಣವಾಗಿ ನಾಮಫಲಕವನ್ನು ಬದಲಿಸಿ ಕನ್ನಡಕ್ಕೆ ಆದ್ಯತೆ ನೀಡುವುದು ಸಹ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಕನ್ನಡೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಹಿಂದೆ ನೀಡಿದ್ದ ಸೂಚನೆಯಂತೆ ಈ ಆದೇಶ ಹೊರಡಿಸಲಾಗಿದೆ.

Comments are closed.