ಕರ್ನಾಟಕ

ಚಿಪ್ಸ್ ತಿಂದು ನಾಲಗೆ ಸುಟ್ಟುಕೊಂಡ ಯುವಕ

Pinterest LinkedIn Tumblr


ವಿಜಯಪುರ(ಅ.18): ಬಣ್ಣಬಣ್ಣದ ಕುರುಕಲು ತಿಂಡಿಗಳನ್ನು ಇಷ್ಟಪಡುವವರು ಈ ಸುದ್ದಿಯನ್ನು ಓದಬೇಕು. ಚಿಪ್ಸ್ ತಿನ್ನಲು ಹೋಗಿ ಯುವಕನೊಬ್ಬ ನಾಲಗೆಯನ್ನೇ ಸುಟ್ಟುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.

ಘಟನೆ ಏನು ?

ವಿನೋದ ಹದಗಲ ಎನ್ನುವ ಯುವಕ ಗುರುವಾರ ರಾತ್ರಿ ಬಾಯಿ ರುಚಿ ತೀರಿಸಲು ರೂ. 60 ಕೊಟ್ಟು ಟೊಮೆಟೋ ಚಿಪ್ಸ್ ಖರೀದಿಸಿದ್ದಾರೆ. ರಾತ್ರಿ 10 ಗಂಟೆಯ ಸುಮಾರಿಗೆ ಈ ಚಿಪ್ಸ್ ಪಾಕೇಟ್ ಹರಿದು ಚಿಪ್ಸ್ ಬಾಯಿಯಲ್ಲಿ ಹಾಕಿದ್ದೆ ತಡ. ಬೆಂಕಿ ಹಾಕಿಕೊಂಡ ಅನುಭವವಾಗಿದೆ. ಹೊರಗೆ ತೆಗೆದಾಗ ಬಾಯಿಯಲ್ಲಿ ರಕ್ತ ಬಂದಿದೆ. ಅರೇ, ಇದೇನಿದು ನಾನು ಬೆಂಕಿಯನ್ನು ಏನಾದರೂ ತಿಂದೆನಾ ಎಂದು ಗೋಳಾಡಿದ್ದಾನೆ. ನಂತರ ಗೊತ್ತಾಗಿದ್ದು, ಆ ಚಿಪ್ಸ್ ರಾಸಾಯನಿಕ ಬಳಸಿ ತಯಾರಿಸಲಾಗಿದೆ ಎಂಬುದು. ಅಷ್ಟೋತ್ತಿಗಾಗಲೇ ಆ ಯುವಕನ ಅರ್ಧ ನಾಲಿಗೆ ಸುಟ್ಟು ಹೋಗಿದೆ. ಗಾಯಗಳಿಂದ ನರಳಾಡುತ್ತ ಆಸ್ಪತ್ರೆ ಸೇರಿದ್ದಾನೆ.

ರಾತ್ರಿ ಇಡಿ ಈ ಯುವಕ ನಾಲಿಗೆಯ ನೋವು ತಾಳಲಾರದೆ ನರಳಾಡಿದ್ದು, ಬೆಳಿಗ್ಗೆ ಈ ವಿಷಯ ತಿಳಿದ ಆತನ ಸಂಬಂಧಿಕರು ಇಂಡಿ ಪೊಲೀಸರಿಗೆ ದೂರು ಮೌಖಿಕವಾಗಿ ದೂರು ನೀಡಿದ್ದಾರೆ. ಆಗ ಕಾರ್ಯ ಪ್ರವೃತ್ತರಾದ ಇಂಡಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಮಾಳಪ್ಪ ಪೂಜಾರಿ, ಅಬ್ದುಲ್ ರೆಹಮಾನ್ ಒಡೆತನದ ಗೋಲ್ಡನ್ ಸ್ಟಾರ್ ಬೇಕರಿಗೆ ಹೋಗಿ ಅಲ್ಲಿದ್ದ ಚಿಪ್ಸ್ ಪಾಕೇಟುಗಳನ್ನು ವಶಪಡಿಸಿಕೊಂಡು ಬೇಕರಿಗೆ ಬೀಗ ಹಾಕಿದ್ದಾರೆ. ಅಲ್ಲದೇ, ವಶಪಡಿಸಿಕೊಳ್ಳಲಾದ ಚಿಪ್ಸ್ ಪಾಕೇಟುಗಳನ್ನು ಆರೋಗ್ಯ ಇಲಾಖೆಗೆ ತಪಾಸಣೆಗೆ ನೀಡಿದ್ದಾರೆ.

ಇಂಡಿ ಆರೋಗ್ಯ ಇಲಾಖೆ ಈ ಸ್ಯಾಂಪಲ್ ಗಳನ್ನು ಇನ್ನಷ್ಟೇ ಬೆಳಗಾವಿಯ ಆಹಾರ ತಪಾಸಣೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಬೇಕಿದೆ. ಬೆಳಗಾವಿಯಿಂದ ವರದಿ ಬಂದ ಮೇಲೆ ಈ ಚಿಪ್ಸ್‌ಗಳಲ್ಲಿ ಯಾವ ರಾಸಾಯನಿಕ ಮಿಶ್ರಣ ಮಾಡಲಾಗಿದೆ ಎಂಬುದು ಗೊತ್ತಾಗಲಿದೆ.

Comments are closed.